೩ ತಿಂಗಳ ಮಗು ಗಂಟಲಲ್ಲಿ ಹಾಲು ಸಿಲುಕಿ ಮೃತ್ಯು
ಕುಂಬಳೆ: ಮೂರು ತಿಂಗಳ ಪ್ರಾಯದ ಮಗು ಗಂಟಲಲ್ಲಿ ಹಾಲು ಸಿಲುಕಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಈಶ್ವರಮಂಗಲ ನಿವಾಸಿಯೂ ಪ್ರಸ್ತುತ ಬಂಬ್ರಾಣದ ಬಾಡಿಗೆ ಮನೆಯಲ್ಲಿ ವಾಸಿಸುವ ಅಸೀಸ್- ಖದೀಜ ದಂಪತಿಯ ಪುತ್ರಿ ಆಯಿಶಾ ಮೆಹ್ರ ಮೃತಪಟ್ಟ ಮಗುವಾಗಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಗಂಟಲಲ್ಲಿ ಹಾಲು ಸಿಲುಕಿ ಅಸ್ವಸ್ಥಗೊಂಡಿರುವುದಾಗಿ ತಿಳಿಸಿ ಮಗುವನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಲಾಗಿತ್ತು. ಆದರೆ ಅಷ್ಟರೊಳಗೆ ಮಗು ಮೃತಪಟ್ಟಿರುವುದಾಗಿ ತಪಾಸಣೆಯಲ್ಲಿ ತಿಳಿದು ಬಂದಿದೆ. ಈ ವಿಷಯವನ್ನು ಆಸ್ಪತ್ರೆ ಅಧಿಕಾರಿಗಳು ಪೊಲೀಸರಿಗೆ ತಿಳಿಸಿದ್ದರು. ಇದರಂತೆ ಪೊಲೀಸರು ಆಸ್ಪತ್ರೆಗೆ ತಲುಪಿದ್ದು, ಆದರೆ ಅಷ್ಟರೊಳಗೆ ಮಗುವನ್ನು ಆಸ್ಪತ್ರೆಯಿಂದ ಕರೆದೊಯ್ಯಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಮಗುವನ್ನು ಈಶ್ವರ ಮಂಗಲದ ಸ್ವ-ಗೃಹಕ್ಕೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆಯ ಅಂಗವಾಗಿ ಅತ್ತ ತೆರಳಲು ನಿರ್ಧರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.