ಅಂಗಡಿಗೆ ತಲುಪಿ ಮಹಿಳೆಯ ಸರ ಎಗರಿಸಿ ಪರಾರಿಯಾದ ಇಬ್ಬರು ಆರೋಪಿಗಳು ಸೆರೆ
ಕಾಸರಗೋಡು: ಅಂಗಡಿಗೆ ತಲುಪಿ ನೀರು ಖರೀದಿಸಿದ ಬಳಿಕ ಅಂಗಡಿಯ ಮಾಲಕನ ಪತ್ನಿಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿಯಾದ ಇಬ್ಬರು ಆರೋಪಿ ಗಳು ಸೆರೆಗೀಡಾಗಿದ್ದಾರೆ. ಕೋಟಿ ಕುಳಂ ವಿಲ್ಲೇಜ್ ವೆಡಿತ್ತರಕ್ಕಾಲ್‌ನ ಫಾತಿಮ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಮುಹಮ್ಮದ್ ಇಜಾಸ್ ಎಂ.ಕೆ. (೨೪), ಪನಯಾಲ್ ವಿಲ್ಲೇಜ್ ಪಾಕಂ ಚೇರ್ಕಪ್ಪಾರ ಹಸ್ನ ಮಂಜಿಲ್‌ನ ಇಬ್ರಾಹಿಂ ಬಾದುಶ (೨೪) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಈ ತಿಂಗೆಳ ೧೦ರಂದು ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಮಡಿಕೈ ಚದುರಕ್ಕಿಣರ್ ಎಂಬಲ್ಲಿನ ಅಂಗಡಿಗೆ ತಲುಪಿದ ಆರೋಪಿಗಳು ನೀರು ಖರೀದಿಸಿದ್ದರು. ಅಂಗಡಿಯ ಮಾಲಕನ ಪತ್ನಿ ನೀರು ಕೊಡುತ್ತಿದ್ದಂತೆ ಆರೋಪಿಗಳು ಆಕೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಬೈಕ್‌ನಲ್ಲಿ ಪರಾರಿಯಾಗಿದ್ದರು. ಈ ಘಟನೆ ತಿಳಿದಾಕ್ಷಣ ಆರೋಪಿಗಳ ಪತ್ತೆಗಾಗಿ ಕಾಞಂಗಾಡ್ ಡಿವೈಎಸ್ಪಿ ಬಾಲಕೃಷ್ಣನ್ ನಾಯರ್, ಹೊಸದುರ್ಗ ಇನ್ಸ್‌ಪೆಕ್ಟರ್ ಕೆ.ಪಿ. ಶೈನ್, ಎಸ್.ಐ. ರಾಜೀವನ್ ಎಂಬಿವರನ್ನೊಳಗೊಂಡ ತಂಡವನ್ನು ರೂಪೀಕರಿಸಲಾಗಿತ್ತು. ಬಳಿಕ ಈ ತಂಡ ಜಿಲ್ಲೆಯ ವಿವಿಧ ಭಾಗಗಳ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದ್ದು, ಅದರಿಂದ ಲಭಿಸಿದ ಸೂಚನೆ ಆಧಾರದಲ್ಲಿ ಕೇವಲ ಹತ್ತು ದಿನಗಳಲ್ಲಿ ಆರೋಪಿಗಳನ್ನು ಸೆರೆ ಹಿಡಿಯಲು ಸಾಧ್ಯವಾಗಿದೆ. ಆರೋಪಿಗಳನ್ನು ತನಿಖೆಗೊಳಪಡಿಸಿದಾಗ ಇನ್ನೂ ಹಲವು ಪ್ರಕರಣಗಳಲ್ಲಿ ಇವರು ಶಾಮೀಲಾಗಿರುವುದು ತಿಳಿದುಬಂದಿದೆ.