ಅಕ್ರಮ ನಾಡಕೋವಿ ನಿರ್ಮಾಣ ಕೇಂದ್ರಕ್ಕೆ ಪೊಲೀಸ್ ದಾಳಿ: ಬಂದೂಕುಗಳ ಸಹಿತ ಓರ್ವ ಸೆರೆ
ಕಾಸರಗೋಡು: ಅಕ್ರಮವಾಗಿ ನಾಡಕೋವಿ ನಿರ್ಮಿಸುತ್ತಿದ್ದ ಕೇಂದ್ರವೊಂದಕ್ಕೆ ಪೊಲೀಸರು ದಾಳಿ ನಡೆಸಿ ಮೂರು ನಾಡನಿರ್ಮಿತ ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ರಾಜಪುರಕ್ಕೆ ಸಮೀಪದ ಆಲಂಕೋಡು ಅರಂಙಂ ಕಾರ್ತಿಕಪುರಂ ನಿವಾಸಿ ಎಂ.ಕೆ. ಅಜಿತ್ ಕುಮಾರ್ (55) ಎಂಬಾತನನ್ನು ಪೊಲೀಸರು ಬಂಧಿಸಿ ಕೇಸು ದಾಖಲಿಸಿ ಕೊಂಡಿದ್ದಾರೆ.
ರಾಜಪುರಂ ಕೋಟೆಕುನ್ನು ಕೈಕುಳನ್‌ಕಲ್ಲು ಎಂಬಲ್ಲಿ ಈ ಅಕ್ರಮ ನಾಡಕೋವಿ ನಿರ್ಮಾಣ ಕೇಂದ್ರ ಕಾರ್ಯವೆಸಗುತ್ತಿತ್ತು. ಆ ಬಗ್ಗೆ ಲಭಿಸಿದ ಮಾಹಿತಿಯಂತೆ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿ ನೀಡಿದ ನಿರ್ದೇಶ ಪ್ರಕಾರ ಬೇಕಲ ಡಿವೈಎಸ್ಪಿ ವಿ.ವಿ. ಮನೋಜ್, ಹೊಸದುರ್ಗ ಡಿವೈಎಸ್ಪಿ ಬಾಬು ಪೆರಿಂಙೋತ್‌ರ ಮೇಲ್ನೋ ಟದಲ್ಲಿ ರಾಜಪುರಂ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪಿ. ರಾಜೇಶ್ ನೇತೃತ್ವದ ಪೊಲೀಸರ ತಂಡ ದಾಳಿ ಮತ್ತು ತಪಾಸಣೆ ನಡೆಸಿದ್ದಾರೆ. ಅಲ್ಲಿ ಪೂರ್ಣವಾಗಿ ನಿರ್ಮಿಸಲಾಗಿದ್ದ ಎರಡು ಅಕ್ರಮ ಬಂದೂಕು, ಭಾಗಶಃ ಪೂರ್ಣಗೊಂಡ ಇನ್ನೊಂದು ನಾಡ ಬಂದೂಕು ಹಾಗೂ ಅದನ್ನು ನಿರ್ಮಿಸಲು ಉಪಯೋಗಿಸುವ ಇತರ ಸಾಮಗ್ರಿಗಳು ಪತ್ತೆಯಾಗಿವೆ. ಅದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಅದಕ್ಕೆ ಸಂಬಂಧಿಸಿ ಆಜಿತ್ ಕುಮಾರ್‌ನನ್ನು ಬಂಧಿಸಿದ್ದಾರೆ. ಈತ ಬಡಗಿ ಕೆಲಸ ಮತ್ತು ಅಕ್ಕಸಾಲಿಗ ಕೆಲಸದಲ್ಲೂ ಪರಿಣತನಾದ ವ್ಯಕ್ತಿಯಾಗಿದ್ದಾನೆ. ಮಾತ್ರವಲ್ಲ ನಾಡಕೋವಿ ನಿರ್ಮಾಣ ಕೆಲಸದಲ್ಲೂ ನಿಸ್ಸೀಮ ನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ನಾಡಕೋವಿ ನಿರ್ಮಾಣ ದಂಧೆಯಲ್ಲಿ ಇನ್ನೂ ಹಲವು ಮಂದಿ ಶಾಮೀಲಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿ ದ್ದಾರೆ.
2010 ಮತ್ತು 2011ರಲ್ಲೂ ಆರೋಪಿಯ ವಿರುದ್ಧ ರಾಜಪುರಂ ಪೊಲೀಸರು ಇಂತಹ ಕೇಸು ದಾಖಲಿಸಿಕೊಂಡಿದ್ದರು. 2012ರಲ್ಲಿ ಸುಳ್ಯದಲ್ಲೂ ಇಂತಹ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಶಿಕ್ಷೆಗೊಳಗಾಗಿದ್ದನೆಂದೂ ಪೊಲೀಸರು ತಿಳಿಸಿದ್ದಾರೆ.