ಅಕ್ಷರ ಪ್ರೇಮಿಗೆ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯಿಂದ ಗೌರವ
ಮಂಜೇಶ್ವರ: ರಸ್ತ್ತೆ ಬದಿಯಲ್ಲಿ ಜ್ಯೂಸ್ ಮಾರಾಟ ಮಾಡಿ ಲಭಿಸುವ ಮೊತ್ತದಿಂದ ಪುಸ್ತಕ ಖರೀದಿಸಿ ಜ್ಯೂಸ್ ಅಂಗಡಿ ಬಳಿಯಲ್ಲೇ ಗ್ರಂಥಾಲಯ ಸಿದ್ಧಪಡಿಸಿದ ಅಕ್ಷರ ಪ್ರೇಮಿಗೆ ಓದುಗರ ದಿನಾಚರಣೆಯಂಗವಾಗಿ ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಪುಸ್ತಕ ನೀಡಿ ಗೌರವಿಸಿದೆ. ಕಾಸರಗೋಡು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯ ಉದ್ಯಾವರ ಮಾಡದಲ್ಲಿ ಜ್ಯೂಸ್ ವ್ಯಾಪಾರ ನಡೆಸುತ್ತಿರುವ ನರೇಂದ್ರ ಕೋಟ್ಯಾನ್‌ರನ್ನು ಗೌರವಿಸಲಾಗಿದೆ. ಇವರು ಸಾವಿರಾರು ಪುಸ್ತಕಗಳನ್ನು ಖರೀದಿಸಿ ಓದುಗರಿಗೆ ನೀಡುತ್ತಿದ್ದಾರೆ. ಈ ಮೊದಲು ಮನೆಯನ್ನೇ ಗ್ರಂಥಾಲಯವ ನ್ನಾಗಿಸಿದ್ದ ಇವರು ಈಗ ಅಂಗಡಿ ಬಳಿಯಲ್ಲೇ ಗ್ರಂಥಾಲಯವನ್ನು ಸಿದ್ಧಪಡಿಸಿ ಓದುಗರಿಗೆ ನೀಡುತ್ತಿದ್ದಾರೆ. ವಿವಿಧ ಸಂಘ ಸಂಸ್ಥೆಗಳು ಇವರಿಗೆ ಕೆಲವು ನೆರವು ನೀಡಿದೆ. ಅಂಗಡಿ ಬಳಿಯ ಗ್ರಂಥಾಲಯವನ್ನು ಪದ್ಮಶ್ರೀ ಹರೇಕಳ ಹಾಜಬ್ಬ ಉದ್ಘಾಟಿಸಿದ್ದರು. ಸಾರ್ವಜನಿಕರು, ಅಂಗಡಿಗೆ ತಲುಪುವವರಿಗೆ ಪುಸ್ತಕ ಓದಲು ಪ್ರೇರಣೆ ನೀಡುವ ಇವರ ಕಾಯಕ ಈಗಾಗಲೇ ಪ್ರಚಾರ ಪಡೆದಿದೆ. ಓದುಗರ ದಿನದಂಗವಾಗಿ ಇವರನ್ನು ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಪದಾಧಿಕಾರಿಗಳು ಗೌರವಿಸಿದ್ದಾರೆ. ಕಾರ್ಯದರ್ಶಿ ಸಂಧ್ಯಾಗೀತ ಬಾಯಾರು, ಅಖಿಲೇಶ್ ನಗುಮುಗಂ, ಗೋವಿಂದ ಭಟ್ ಗಿರಿ, ಮರಿಯ, ಸುಚಿತ್ರ, ಪ್ರತೀಕ್ ಎ. ಬದಿಯಡ್ಕ ಉಪಸ್ಥಿತರಿದ್ದರು.