ಅಡುಗೆ ಅನಿಲ ಟ್ರಕ್ ಚಾಲಕರ ಮುಷ್ಕರ: ಚರ್ಚೆ ವಿಫಲ; ಮನೆ ಬಳಕೆ ಜಾಡಿಗೂ ತತ್ವಾರ ಸೃಷ್ಟಿ
ಕಾಸರಗೋಡು: ವೇತನ ಹೆಚ್ಚಳ ಆಗ್ರಹಿಸಿ ಅಡುಗೆ ಅನಿಲ ಜಾಡಿ ಸಂಚಾರ ಟ್ರಕ್ ಚಾಲಕರು ನಡೆಸುವ ಮುಷ್ಕರವನ್ನು ಕೊನೆಗೊಳಿಸಲು ನಡೆಸಿದ ಚರ್ಚೆಯಲ್ಲಿ ತೀರ್ಮಾನವಾಗದೆ ಕೊನೆಗೊಂಡಿದೆ. ಮಂಗಳೂರು ಹಿಂದೂಸ್ತಾನ್ ಪೆಟ್ರೋಲಿಯಂ ಪ್ಲಾಂಟ್ ಮೆನೇಜರ್ ಎಸ್. ನೀಲಕಂಠನ್‌ರ ಮಧ್ಯಸ್ಥಿಕೆಯಲ್ಲಿ ಲಾರಿ ಮಾಲಕರು ಹಾಗೂ ಚಾಲಕರ ಸಂಘಟನೆಯ ಪ್ರತಿನಿಧಿಗಳು ನಡೆಸಿದ ಚರ್ಚೆಯಲ್ಲಿ ಎರಡು ವಿಭಾಗಗಳೂ ಅವರವರ ನಿಲುವಿನಿಂದ ಚಲಿಸದ ಕಾರಣ ಚರ್ಚೆಯಲ್ಲಿ ತೀರ್ಮಾನ ಉಂಟಾಗಲಿಲ್ಲ. ಸಣ್ಣ ಟ್ರಕ್‌ಗಳಿಗೆ ಕನಿಷ್ಠ ಕೂಲಿಯಾಗಿ 1365 ರೂ. ಹಾಗೂ 10 ಚಕ್ರವಿರುವ ಟ್ರಕ್‌ಗಳಿಗೆ1675 ರೂ.ವಾಗಿ ಹೆಚ್ಚಿಸಬೇಕೆಂದು ಲಾರಿ ಚಾಲಕರು ಬೇಡಿಕೆ ಇಟ್ಟಿದ್ದಾರೆ. ಮೊದಲ 200 ಕಿಲೋ ಮೀಟರ್‌ಗೆ ಕನಿಷ್ಟ ಕೂಲಿ ಅನ್ವಯವಾಗುತ್ತದೆ. ಪ್ರಸ್ತುತ 1075, 1450 ರೂ. ನೀಡಲಾಗುತ್ತಿದೆ. ಮುಂದಿನ ಕಿಲೋ ಮೀಟರ್‌ಗಳಿಗೆ ಹೆಚ್ಚಳ ಆಗ್ರಹಿಸುವುದಿಲ್ಲ. ಕ್ಲೀನರ್ ಹೆಸರಲ್ಲಿ ನೀಡುವ 300 ರೂ.ವನ್ನು 600 ರೂ. ಆಗಿ ಹೆಚ್ಚಿಸಬೇಕೆಂದು ಇವರು ಆಗ್ರಹಿಸುತ್ತಿದ್ದಾರೆ. ಕೇರಳದಲ್ಲಿ ಈ ವೇತನಕ್ಕೆ ಅಂಗೀಕಾರವಿದೆ. ಆದರೆ ಇದನ್ನು ಅಂಗೀಕರಿಸಲು ಮಂಗಳೂರಿನ ಲಾರಿ ಮಾಲಕರು ಸಿದ್ಧರಿಲ್ಲ. ಚರ್ಚೆಯಲ್ಲಿ ಲಾರಿ ಮಾಲಕರು ಅನುಕೂಲ ನಿಲುವು ಸ್ವೀಕರಿಸದ ಕಾರಣ ಸಭೆ ನಿರ್ಣಯವಾಗದೆ ಮುಗಿದಿದೆ.
ಇದರೊಂದಿಗೆ ಕಾಸರಗೋಡಿನಿಂದ ಕಲ್ಲಿಕೋಟೆವರೆಗಿರುವ ಜಿಲ್ಲೆಗಳಲ್ಲಿ ಅಡುಗೆ ಅನಿಲ ಸಿಲಿಂಡರ್ ವಿತರಣೆ ಪೂರ್ಣವಾಗಿ ಮೊಟಕುಗೊಳ್ಳುವ ಸ್ಥಿತಿಗೆ ತಲುಪಿದೆ. ಬೆರಳೆಣಿಕೆ ಏಜೆನ್ಸಿಗಳಲ್ಲಿ ಮಾತ್ರವೇ ಕಳೆದ ಎರಡು ದಿನಗಳಿಂದ ಅಡುಗೆ ನಿಲ ವಿತರಿಸಲಾಗುತ್ತಿದೆ. ಉಳಿದ ಏಜೆನ್ಸಿಗಳಲ್ಲಿ ಮುಷ್ಕರ ಆರಂಭಿಸಿದ ಎರಡು ದಿನಗಳಲ್ಲೇ ಸಂದ್ರಹ ಮುಗಿದಿತ್ತು. ಉತ್ತರ ಮಲಬಾರ್‌ಗೆ ಅಡುಗೆ ಅನಿಲ ಸಿಲಿಂಡರನ್ನು ಕೊಂಡುಹೋಗುವ ಮಂಗಳೂರು ಸುರತ್ಕಲ್‌ನ ಹಿಂದೂಸ್ತಾನ್ ಪೆಟ್ರೋಲಿಯಂನ, ಐಒಸಿ, ಬಿಪಿಸಿಎಲ್ ಪ್ಲಾಂಟ್‌ಗಳ ೧೫೦ರಷ್ಟು ಲಾರಿ ಚಾಲಕರು ಈ ತಿಂಗಳ ೧೬ರಿಂದ ಮುಷ್ಕರ ಹೂಡುತ್ತಿದ್ದಾರೆ. ಮೂರು ಪ್ಲಾಂಟ್‌ಗಳಲ್ಲಿ ದಿನಂಪ್ರತಿ 240ರಷ್ಟು ಟ್ರಕ್‌ಗಳು ಕೇರಳಕ್ಕೆ ತಲುಪುತ್ತಿದತ್ತು. ಇದು ಕಳೆದ ಆರು ದಿನಗಳಿಂದ ಮೊಟಕಾಗಿದೆ. ಇನ್ನೂ ಮುಷ್ಕರ ಮುಂದುವರಿದಲ್ಲಿ ಮನೆ ಬಳಕೆಯ ಸಿಲಿಂಡರ್ ಕೂಡಾ ಲಭಿಸದೆ ಸಮಸ್ಯೆ ಉಂಟಾಗಲಿದೆ. ಹೊಟೇಲ್‌ಗಳು, ಶಾಲೆಗಳು, ವಾಣಿಜ್ಯ ಅಗತ್ಯದವರು ಈಗಾಗಲೇ ಸಂದಿಗ್ಧತೆಯಲ್ಲಿದ್ದಾರೆ.
ಈ ಬಗ್ಗೆ ನಡೆದ ಚರ್ಚೆಯಲ್ಲಿ ಕೇರಳ ಟ್ಯಾಂಕರ್ ಲಾರಿ ಡ್ರೈವರ್ಸ್ ಯೂನಿಯನ್ ಸಿಐಟಿಯು ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಎ. ಪ್ರೇಮರಾಜನ್, ಬಿಎಂಎಸ್ ಯೂನಿಟ್ ಸೆಕ್ರೆಟರಿ ಬಿಜು ಭರತ್ ಹಾಗೂ ಚಾಲಕರ ಪರವಾಗಿ ಪ್ರತಿನಿಧಿಗಳು ಭಾಗವಹಿಸಿದರು.