ಅಡೂರಿನಲ್ಲಿ ಯುವಕನಿಗೆ ಹಲ್ಲೆ, ಮನೆಗೆ ಕಲ್ಲೆಸೆತ ಪ್ರಕರಣದ ಆರೋಪಿ 30 ವರ್ಷಗಳ ಬಳಿಕ ಸೆರೆ
ಮುಳ್ಳೇರಿಯ: ಯುವಕನನ್ನು ತಡೆದು ನಿಲ್ಲಿಸಿ ಹಲ್ಲೆಗೈದು ಆತನ ಮನೆಗೆ ಕಲ್ಲೆಸೆದು ಹೆಂಚು ನಾಶ ಗೊಳಿಸಲಾಯಿತೆಂಬ ಪ್ರಕರಣದ ಆರೋಪಿಯನ್ನು 30 ವರ್ಷಗಳ ಬಳಿಕ ಬಂಧಿಸಲಾಗಿದೆ. ಅಡೂರು ಮೂಲ ಹೌಸ್ನ ಎಂ.ಇ. ಬಾತಿಶ (48) ಎಂಬಾತನನ್ನು ಆದೂರು ಎಸ್ಐ ವಿನೋದ್ ಕುಮಾರ್, ಎಎಸ್ಐ ಸತ್ಯಪ್ರಕಾಶ್ ಜಿ, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ರಾಘವನ್, ಸಿಪಿಒ ಹರೀಶ್ ಎಂಬಿವರು ಸೇರಿ ಸೆರೆಹಿಡಿದಿದ್ದಾರೆ.
1995 ಎಪ್ರಿಲ್ 21ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಅಂದು ಆರೋಪಿಯಾದ ಬಾತಿಶನಿಗೆ ಪ್ರಾಯ 18 ವರ್ಷ ವಾಗಿತ್ತು. ಅಡೂರಿನ ಟಿ. ಅಬೂಬಕ್ಕರ್ ಎಂಬವರ ಮೇಲೆ ಈತ ಹಲ್ಲೆ ನಡೆಸಿದ್ದನು. ಹಲ್ಲೆಯಿಂದ ದೂರುಗಾರನ ತಾಯಿ ಕೂಡಾ ಗಾಯಗೊಂಡಿದ್ದರು. ಘಟನೆ ಬಳಿಕ ತಲೆಮರೆಸಿಕೊಂಡ ಬಾತಿಶ ಗಲ್ಫ್ ಹಾಗೂ ಊರಿನಲ್ಲಿ ವಾಸಿಸುತ್ತಿದ್ದ ನೆನ್ನಲಾಗಿದೆ. ಈತನನ್ನು ಬಂಧಿಸಲು ಹಲವು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಈತನನ್ನು ತಲೆಮರೆಸಿಕೊಂಡ ಆರೋಪಿಯೆಂದು ಘೋಷಿಸ ಲಾಯಿತು. ಈಮಧ್ಯೆ ಆರೋಪಿ ಪೈವಳಿಕೆ, ಚೇವಾರು, ಮಡುವಾಳಗದ್ದೆ ಎಂಬಲ್ಲಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರಂತೆ ನಿನ್ನೆ ಬೆಳಿಗ್ಗೆ ಅಲ್ಲಿಗೆ ತಲುಪಿದ ಎಸ್ಐ ಹಾಗೂ ತಂಡ ಆರೋಪಿಯನ್ನು ಬಂಧಿಸಿದೆ.