ಅಡೂರು ಬಳಿ ಕುಣಿಕೆಗೆ ಸಿಲುಕಿದ ಚಿರತೆ ಸಾವು
ಅಡೂರು: ಕಾಡು ಹಂದಿಯನ್ನು ಹಿಡಿಯಲು ಇರಿಸಿದ ಕುಣಿಕೆಗೆ ಸಿಲುಕಿದ ಚಿರತೆ ಸಾವಿಗೀಡಾದ ಘಟನೆ ನಡೆದಿದೆ. ದೇಲಂಪಾಡಿ ಪಂಚಾಯತ್ನ ಮಲ್ಲಂಪಾರೆ ಎಂಬಲ್ಲಿನ ರಬ್ಬರ್ ತೋಟದಲ್ಲಿ ನಿನ್ನೆ ಬೆಳಿಗ್ಗೆ ಚಿರತೆ ಕುಣಿ ಕೆಗೆ ಸಿಲುಕಿರುವುದು ಕಂಡುಬಂದಿತ್ತು. ಆದರೆ ಕೆಲವೇ ಗಂಟೆಗಳೊಳಗೆ ಅದು ಸಾವಿಗೀಡಾಗಿದೆ. ಘಟನೆ ಬಗ್ಗೆ ಅರಣ್ಯ ಇಲಾಖೆಯ ಬಂದಡ್ಕ ಸೆಕ್ಷನ್ ಕಚೇರಿ ಅಧಿಕಾರಿಗಳು ವನ್ಯಜೀವಿ ಸಂರಕ್ಷಣೆ ಕಾಯ್ದೆ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ.
ನಿನ್ನೆ ಬೆಳಿಗ್ಗೆ 8 ಗಂಟೆ ವೇಳೆ ಅಣ್ಣಪ್ಪ ನಾಯ್ಕ್ ಎಂಬವರ ರಬ್ಬರ್ ತೋಟದಲ್ಲಿ ಚಿರತೆ ಕುಣಿಕೆಯಲ್ಲಿ ಸಿಲುಕಿರುವುದು ಕಂಡುಬಂದಿದೆ. ತೋಟದಿಂದ ಅಸಾಮಾನ್ಯ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ನೋಡಿದಾಗ ಚಿರತೆ ಕುಣಿಕೆಯಲ್ಲಿ ಸಿಲುಕಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದ್ದು, ಕಾಸರಗೋಡು ರೇಂಜ್ ಆಫೀಸರ್ ಸಿ.ವಿ. ವಿನೋದ್ ಕುಮಾರ್ ನೇತೃತ್ವದ ತಂದ ಸ್ಥಳಕ್ಕೆ ತಲುಪಿತ್ತು. ಅನಂತರ ವಯನಾಡ್ನ ವೆಟರ್ನರಿ ತಜ್ಞರಿಗೆ ಮಾಹಿತಿ ನೀಡಲಾಗಿತ್ತು. ಆದೂರು ಎಸ್ ಐ ಕೆ. ಅನುರೂಪ್ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿದ್ದರು. ಬಳಿಕ ಮಾದಕಗುಂಡು ಹಾರಿಸಿ ಚಿರತೆಯನ್ನು ಸೆರೆಹಿಡಿದು ರಕ್ಷಿಸಲಿರುವ ಪ್ರಯತ್ನ ನಡೆಯುತ್ತಿದ್ದಂತೆ ಮಧ್ಯಾಹ್ನ ವೇಳೆ ಚಿರತೆ ಸಾವಿಗೀ ಡಾಗಿದೆ. ಚಿರತೆಯ ಹೊಟ್ಟೆ ಭಾಗಕ್ಕೆ ಕುಣಿಕೆಯ ಕೇಬಲ್ ಸಿಲುಕಿತ್ತು. ಬೇರೆ ಕಡೆಯಲ್ಲಿ ಕುಣಿಕೆಗೆ ಸಿಲುಕಿದ ಚಿರತೆ ಅದನ್ನು ಎಳೆದುಕೊಂ ಡು ಮಲ್ಲಂಪಾರೆಗೆ ತಲುಪಿರಲು ಸಾಧ್ಯತೆಯಿದೆಯೆಂದು ಅಂದಾಜಿಸ ಲಾಗಿದೆ. ಚಿರತೆಯ ಮೃತದೇಹವನ್ನು ಪಾಂಡಿಯ ಸೆಕ್ಷನ್ ಕಚೇರಿಯಲ್ಲಿ ಇಂದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಸ್ಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.