ಅತ್ತೆಯನ್ನು ಕುತ್ತಿಗೆ ಹಿಚುಕಿ ಕೊಂದ ಪ್ರಕರಣ: ಆರೋಪಿ ಸೊಸೆಗೆ ಜೀವಾವಧಿ ಸಜೆ, 2 ಲಕ್ಷ ರೂ. ಜುಲ್ಮಾನೆ
ಕಾಸರಗೋಡು: ಪತಿಯ ತಾಯಿಯನ್ನು ಕೊಲೆಗೈದ ಪ್ರಕರಣದ ಆರೋಪಿಯಾಗಿರುವ ಸೊಸೆಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ಪ್ರಥಮ)ದ ನ್ಯಾಯಾಧೀಶರಾದ ಎ. ಮನೋಜ್ ಅವರು ಜೀವಾವಧಿ ಸಜೆ ಹಾಗೂ 2 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಜಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ೨ ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಕೊಳತ್ತೂರು ಗ್ರಾಮದ ಚೆಪ್ಪನ ಡ್ಕದ ಕಮಲಾಕ್ಷನ್ ಎಂಬವರ ಪತ್ನಿ ಅಂಬಿಕ ಪಿ. (49) ಪ್ರಕರಣದ ಆರೋಪಿಯಾಗಿದ್ದು, ಆಕೆಗೆ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.
2014 ಸೆಪ್ಟಂಬರ್ 16ರಂದು ರಾತ್ರಿ ಕೊಳತ್ತೂರು ಗ್ರಾಮದ ಚೆಪ್ಪನಡ್ಕದ ಮನೆಯ ಚಾವಡಿಯಲ್ಲಿ ಮಲಗಿದ್ದ ಪತಿಯ ತಾಯಿ ಅಮ್ಮಾಳು ಅಮ್ಮರನ್ನು ಕುತ್ತಿಗೆ ಹಿಚುಕಿ ಕೊಲೆಗೈದ ಬಳಿಕ ಅದು ಆತ್ಮಹತ್ಯೆಯಾಗಿದೆ ಎಂಬ ಪ್ರತೀತಿ ಮೂಡಿಸಲು ಮೃತದೇಹವನ್ನು ಅಲ್ಲೇ ನೇಣು ಬಿಗಿದು ತೂಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಬೇಡಗಂ ಪೊಲೀಸರು ಅಂಬಿಕಾಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಇದೇ ಪ್ರಕರಣದ ಎರಡನೇ ಮತ್ತು ಮೂರನೇ ಆರೋಪಿಗಳ ಮೇಲಿನ ಆರೋಪಗಳು ವಿಚಾರಣೆಯಲ್ಲಿ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರಿಬ್ಬರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ. ಕೊಲೆಗೈಯ್ಯಲ್ಪಟ್ಟ ಅಮ್ಮಾಳು ಅಮ್ಮ ಅವರ ಮನೆಯಲ್ಲಿ ಸದಾ ಕಿರುಕುಳಕ್ಕೊಳಗಾಗುತ್ತಿದ್ದರೆಂದೂ, ಆ ವಿಷಯವನ್ನು ಅವರು ನೆರೆಮನೆಯ ವರಲ್ಲಿ ಹೇಳಿದ್ದರೆಂದೂ, ಆ ದ್ವೇಷದಿಂದ ಅವರನ್ನು ಕೊಲೆಗೈಯ್ಯ ಲಾಗಿತ್ತೆಂದು ಪೊಲೀಸರು ದಾಖಲಿಸಿ ದ ಪ್ರಕರಣದಲ್ಲಿ ಹೇಳಲಾಗಿದೆ.
ಈ ಕೊಲೆ ಪ್ರಕರಣದ ತನಿಖೆಯನ್ನು ಅಂದು ಬೇಡಗಂ ಪೊಲೀಸ್ ಠಾಣೆಯ ಎಸ್.ಐ ಆಗಿದ್ದ ಕೆ. ಆನಂದ್ ನಡೆಸಿದ್ದರು. ನಂತರ ಅಂದು ಆದೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಎ. ಸತೀಶ್ ಕುಮಾರ್ ಮುಂದಿನ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರ ಹೆಚ್ಚುವರಿ ಗವರ್ಮೆಂಟ್ ಪ್ಲೀಡರ್ ಇ. ಲೋಹಿತಾಕ್ಷನ್ ನ್ಯಾಯಾಲಯದಲ್ಲಿ ವಾದಿಸಿದ್ದರು.