ಅನಧಿಕೃತ ಹೊಯ್ಗೆ ಸಂಗ್ರಹ ವಿರುದ್ದ ಪೊಲೀಸ್ ಕಾರ್ಯಾಚರಣೆ: 25 ಕಡವುಗಳು, 10 ದೋಣಿಗಳ ನಾಶ
ಕುಂಬಳೆ: ಮಳೆಗೆ ಅಲ್ಪ ಶಮನ ಉಂಟಾಗುತ್ತಿದ್ದಂತೆ ಹೊಳೆಗಳಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸುವ ದಂಧೆ ಮತ್ತೆ ತೀವ್ರಗೊಂಡಿದೆ. ಇದರ ವಿರುದ್ದ ಕುಂಬಳೆ ಪೊಲೀಸ್ 25 ಅನಧಿಕೃತ ಕಡವುಗಳನ್ನು ಜೆಸಿಬಿ ಬಳಸಿ ನಾಶಗೊಳಿಸಲಾಗಿದೆ. ಹೊಯ್ಗೆ ಸಂಗ್ರಹಕ್ಕೆ ಬಳಸುತ್ತಿದ್ದ 10 ದೋಣಿಗಳನ್ನು ಪುಡಿಗೈಯ್ಯಲಾಗಿದೆ. ಹೊಯ್ಗೆ ಮಾಫಿಯಾ ತಂಡಗಳು ಕಡವು ಹಾಗೂ ಸಮೀಪದಲ್ಲಿ ಬಚ್ಚಿಟ್ಟಿದ್ದ 25ಲೋಡ್ ಹೊಯ್ಗೆ ಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಇದರಲ್ಲಿ ಅರ್ಧದಷ್ಟು ಹೊಯ್ಗೆಯನ್ನು ಠಾಣೆ ಪರಿಸರಕ್ಕೆ ತಲುಪಿಸಲಾಗಿದೆ. ಬಾಕಿ ಹೊಯ್ಗೆಯನ್ನು ಹೊಳೆಗೆ ಸುರಿಯಲಾಯಿತು. ಕುಂಬಳೆ ಠಾಣೆ ವ್ಯಾಪ್ತಿಯಲ್ಲಿ ಬರುವ ಕುಂಬಳೆ, ಪುತ್ತಿಗೆ, ಮಂಗಲ್ಪಾಡಿ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಹೊಯ್ಗೆ ಸಂಗ್ರಹ ದಂಧೆ ತೀವ್ರಗೊಂಡಿರುವುದಾಗಿ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ಮೊನ್ನೆ ರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ.