ಅನ್ಯಮತೀಯ ಯುವತಿಯನ್ನು ಪ್ರೀತಿಸಿದ ಯುವಕನ ಬರ್ಬರ ಕೊಲೆ
ಕೊಪ್ಪಳ: ಅನ್ಯಮತೀಯ ಯುವತಿಯನ್ನು ಪ್ರೀತಿಸಿದ ದ್ವೇಷದಿಂದ ಯುವಕನೋರ್ವನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಘಟನೆ ಕರ್ನಾಟಕದ ಕೊಪ್ಪಳ ನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಕೊಪ್ಪಳ ನಿವಾಸಿ ನಿಗಂಜ ಟಣಕನಲ್ ಎಂಬವರ ಪುತ್ರ ಗವಿ ಸಿದ್ಧಪ್ಪ ನಾಯ್ಕ್ 25) ಕೊಲೆಗೀಡಾದ ಯುವಕ. ಈ ಸಂಬಂಧ ಸ್ಥಳೀಯ ನಿವಾಸಿಯಾದ ಸಾದಿಕ್ ಕೋಲ್ಕರ್ ಎಂಬಾತ ಸಹಿತ ನಾಲ್ವರ ವಿರುದ್ಧ ಕೊಪ್ಪಳ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ಪೈಕಿ ಆರೋಪಿ ಸಾದಿಕ್ ಕೊಲೆಗೈದ ಬಳಿಕ ನೇರವಾಗಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಅದರಂತೆ ಈತ ಸೇರಿದಂತೆ ನಾಲ್ವರ ವಿರುದ್ಧ ಸೆಕ್ಷನ್ 103(1) ಬಿಎನ್‌ಎಸ್ 2023ರ ಕಲಂ 3(2ವಿ) ಎಸ್‌ಸಿಎಸ್‌ಟಿ ಕಾಯ್ದೆ 1989ರ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.
ಕೊಲೆಗೈಯ್ಯಲ್ಪಟ್ಟ ಗವಿ ಸಿದ್ಧಪ್ಪ ಅನ್ಯಮತೀಯಳಾದ ಯುವತಿಯೋ ರ್ವಳನ್ನು ಕಳೆದ ಎರಡು ವರ್ಷಗಳಿಂದ ಪ್ರೀಸುತ್ತಿದ್ದನೆನ್ನಲಾಗಿದೆ. ಮಾತ್ರವಲ್ಲದೆ ಆಕೆಯ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದನು. ಈ ಕುರಿತು ನಾಲ್ಕೈದು ಬಾರಿ ಪಂಚಾಯತ್ ಸಭೆ ಕರೆದು ಚರ್ಚೆ ನಡೆಸಲಾಗಿದೆ. ಆದರೂ ಗವಿ ಸಿದ್ಧಪ್ಪ ಹಾಗೂ ಯುವತಿಯ ನಡುವಿನ ಪ್ರೀತಿ ಮುಂದುವರಿದಿದ್ದು ಆ ದ್ವೇಷವೇ ಕೊಲೆಗೆ ಕಾರಣವೆಂದು ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ತಿಳಿಸಲಾಗಿದೆ.
ನಿನ್ನೆ ರಾತ್ರಿ ಬಹದ್ದೂರ್ ಬಂಡಿ ರಸ್ತೆ ಮೂಲಕ ಹೋಗುತ್ತಿದ್ದ ಗವಿ ಸಿದ್ಧಪ್ಪನನ್ನು ಅಡ್ಡಗಟ್ಟಿ ಕುತ್ತಿಗೆಗೆ ಮಚ್ಚಿನಿಂದ ಕಡಿದು ಬರ್ಬರವಾಗಿ ಕೊಲೆಗೈಯ್ಯಲಾಗಿದೆ. ಕೊಲೆಗೈಯ್ಯಲ್ಪಟ್ಟ ಗವಿ ಸಿದ್ಧಪ್ಪ ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ.