ಅನ್ಯರಾಜ್ಯ ಬೋಟ್‌ಗಳ ಕಾರ್ಯಾಚರಣೆ: ಮೀನು ಅಲಭ್ಯದಿಂದ ಕಂಗಾಲಾದ ಮೀನು ಕಾರ್ಮಿಕರು
ಕಾಸರಗೋಡು: ಕೇರಳ ಕರಾವಳಿಯಲ್ಲಿ ಅನ್ಯರಾಜ್ಯಗಳ ಬೋಟ್‌ಗಳು ಮೀನುಗಾರಿಕೆಯಲ್ಲಿ ನಿರತವಾಗಿದ್ದಲ್ಲಿ ಇದು ಇಲ್ಲಿನ ಮೀನುಗಾರರಿಗೆ ಮೀನು ಲಭ್ಯತೆ ಕಡಿಮೆಯಾಗಲು ಕಾರಣವಾಗುತ್ತಿದೆ ಯೆಂಬ ದೂರು ಕೇಳಿಬಂದಿದೆ.
ಅತ್ಯಾಧುನಿಕ ವ್ಯವಸ್ಥೆಗಳು ಹಾಗೂ ಬೋಟ್‌ಗಳನ್ನು ಬಳಸಿಕೊಂಡು ಇಲ್ಲಿನ ಮತ್ಸ್ಯ ಸಂಪತ್ತನ್ನು ಮಂಗಳೂರು ಭಾಗದಿಂದ ಬರುವ ಬೋಟ್‌ಗಳು ದೋಚುತ್ತಿವೆ. ೧೨ ನೋಟಿಕಲ್ ಮೈಲ್‌ನಾಚೆಗೆ ದೊಡ್ಡ ಯಂತ್ರ ಬೋಟ್‌ಗಳು ಹಾಗೂ ಅನ್ಯರಾಜ್ಯ ಬೋಟ್‌ಗಳು ಮೀನು ಹಿಡಿಯಬಹುದಾಗಿದೆ. ಆದರೆ ಕರಾವಳಿ ಯಿಂದ ೫ ಮೈಲಿನ ಆಚೆಗೆ ಇವು ರಾತ್ರಿ ಹೊತ್ತಿನಲ್ಲಿ ಮೀನುಗಾರಿಕೆಯಲ್ಲಿ ತೊಡಗುತ್ತಿವೆ ಎಂದೂ ದೂರಲಾಗಿದೆ.
ಬೇಸಿಗೆ ಉಷ್ಣತೆ ಹೆಚ್ಚುವುದ ರೊಂದಿಗೆ ಮೀನು ಲಭ್ಯತೆಯಲ್ಲಿ ಕುಸಿತವುಂಟಾಗಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಹೊರಡಿಸುವ ಜಾಗ್ರತಾ ನಿರ್ದೇಶಗಳನ್ನು ಅವಗಣಿಸಿ ಕಾರ್ಮಿಕರು ಸಮುದ್ರದಲ್ಲಿ ಬೋಟ್ ನೊಂದಿಗೆ ತೆರಳುತ್ತಿರುವುದು ಆರ್ಥಿಕ ಸಂದಿಗ್ಧತೆಯಿಂದ ಪಾರಾಗಲಿರುವ ಪ್ರಯತ್ನವಾಗಿದೆ. ಇದೇ ಸಂದರ್ಭದಲ್ಲಿ ಅನಧಿಕೃತವಾಗಿ ನಡೆಯುವ ಮೀನುಗಾರಿಕೆ ಕೂಡಾ ಇಲ್ಲಿನ ಮೀನು ಕಾರ್ಮಿಕರಿಗೆ ಸವಾಲಾಗಿ ಪರಿಣಮಿಸಿದೆ ಎಂದು ದೂರಲಾಗಿದೆ. ಅನಧಿಕೃತವಾಗಿ ಮೀನುಗಾರಿಕೆ ನಡೆಸಿದ ಆರೋಪದಂತೆ ಕಳೆದ ವರ್ಷ ೩೫ ಬೋಟ್‌ಗಳನ್ನು ಕಾಸರಗೋಡು ತೀರದಿಂದ ವಶಪಡಿಸಲಾಗಿತ್ತು. ಅಲ್ಲದೆ ೬೮ ಲಕ್ಷ ರೂಪಾಯಿ ದಂಡ ಹೇರಲಾಗಿದೆ. ಈ ಹಣಕಾಸು ವರ್ಷ ಆರಂಭಿಸಿ ಎರಡು ತಿಂಗಳಾಗುತ್ತಲೇ ೩ ಬೋಟ್‌ಗಳನ್ನು ಮೀನುಗಾರಿಕಾ ಇಲಾಖೆ ಹಾಗೂ ಕರಾವಳಿ ಪೊಲೀಸರು ಸೆರೆ ಹಿಡಿದಿದ್ದಾರೆ.