ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ತಲುಪಿಸಿ ರಕ್ಷಿಸಿದ ಆಟೋ ಚಾಲಕನಿಗೆ ಬಿಜೆಪಿಯಿಂದ ಸನ್ಮಾನ
ಕುಂಬಳೆ: ಇತ್ತೀಚೆಗೆ ಕುಂಬಳೆ ಜಿಎಸ್ಬಿಎಸ್ ಶಾಲೆ ವಠಾರದಲ್ಲಿ ವಾಹನ ಢಿಕ್ಕಿಹೊಡೆದು ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ತಲುಪಿಸಿ ಆತನನ್ನು ಅಪಾಯದಿಂದ ರಕ್ಷಿಸಿದ ಆಟೋ ಚಾಲಕ ಸೆಲ್ತು ಮುಹಮ್ಮದ್ ಅವರನ್ನು ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಆಟೋ ರಿಕ್ಷಾದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವೇಳೆ ಬೇರೊಂದು ವಾಹನ ಢಿಕ್ಕಿ ಹೊಡೆದು ಕಾಲಿಗೆ ಗಂಭೀರ ಗಾಯಗೊಂಡು ರಸ್ತೆಬದಿ ನಿಂತಿದ್ದ ವಿದ್ಯಾರ್ಥಿಯನ್ನು ಸೆಲ್ತು ಮುಹಮ್ಮದ್ ಕೂಡಲೇ ತನ್ನ ವಾಹನದಲ್ಲಿ ಆಸ್ಪತ್ರೆಗೆ ತಲುಪಿಸಿದ್ದರು. ಸೆಲ್ತು ಮುಹಮ್ಮದ್ರ ಸಮಯೋಚಿತ ಕರ್ತವ್ಯದಿಂದ ಮಗುವನ್ನು ಅಪಾಯದಿಂದ ರಕ್ಷಿಸಲಾಯಿತು. ಇವರ ಮಾನವೀಯತೆಯನ್ನು ಪರಿಗಣಿಸಿ ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು. ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯ ವಿ. ರವೀಂದ್ರನ್ ಶಾಲು ಹೊದಿಸಿ ಸನ್ಮಾನಿಸಿದರು. ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ಸ್ಮರಣಿಕೆ ನೀಡಿ ಗೌರವಿಸಿದರು. ನೇತಾರರಾದ ವಸಂತ ಮಯ್ಯ, ಅನಿಲ್ ಕುಮಾರ್ ಮಣಿಯಂಪಾರೆ, ಸುಜಿತ್ ರೈ, ಪ್ರದೀಪ್ ಆರಿಕ್ಕಾಡಿ, ಮಹಿಳಾ ಮೋರ್ಛಾ ಮಂಡಲ ಪ್ರಧಾನ ಕಾರ್ಯದರ್ಶಿ ರಚನಾ, ಕುಂಬಳೆ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಧಾಕೃಷ್ಣ ರೈ ಮಡ್ವ, ಕಚೇರಿ ಕಾರ್ಯದರ್ಶಿ ಶಶಿ ಕುಂಬಳೆ, ಪಂಚಾಯತ್ ಸಮಿತಿ ಉಪಾಧ್ಯಕ್ಷ ಗೋಪಾಲ ಕಂಚಿಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.