ಅಪಾಯಕಾರಿ ಕಂಚಿಕಟ್ಟೆ ಸೇತುವೆ ಮೂಲಕ ಘನ ವಾಹನಗಳ ಸಂಚಾರಕ್ಕೆ ತಡೆ: ನಾಗರಿಕರಿಗೆ ಸಮಸ್ಯೆ

ಕುಂಬಳೆ: ಕಂಚಿಕಟ್ಟೆ  ಸೇತುವೆ ಮೂಲಕ ಘನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿರುವುದು ಈ ಭಾಗದ ಜನರಿಗೆ ತೀವ್ರಸಮಸ್ಯೆ ಸೃಷ್ಟಿಸಿದೆ.

ಆರು ವರ್ಷಗಳ ಹಿಂದೆಯೇ ಅಪಾಯಕಾರಿಯೆಂದು ಅಧಿಕಾರಿಗಳು ಮುನ್ಸೂಚನೆ ನೀಡಿದ ಕಂಚಿಕಟ್ಟೆ ಸೇತುವೆಯ ದುರಸ್ತಿಗೆ ಕ್ರಮ ಉಂಟಾಗಿಲ್ಲ. ಬದಲಾಗಿ ಸೇತುವೆ ಮೂಲಕ ವಾಹನ ಸಂಚಾರಕ್ಕೆ ತಡೆಯೊಡ್ಡಲು ಅಧಿಕಾರಿಗಳು ಇತ್ತೀಚೆಗೆ ದಿಢೀರ್ ಮುಂದಾಗಿದ್ದಾರೆ.

ಕಳೆದ ಶುಕ್ರವಾರ ಮಧ್ಯಾಹ್ನ ಅಧಿಕಾರಿಗಳು ಕಂಚಿಕಟ್ಟೆಗೆ ತಲುಪಿ ಸೇತುವೆ ಮೇಲೆ ಕಾಂಕ್ರೀಟ್ ಗೋಡೆ ನಿರ್ಮಿಸಿ ವಾಹನಗಳ  ಸಂಚಾರಕ್ಕೆ ತಡೆಯೊಡ್ಡಲು ಮುಂದಾಗಿದ್ದರು. ಆದರೆ ನಾಗರಿಕರು, ರಾಜಕಾರಣಿಗಳು, ಜನಪ್ರತಿನಿಧಿಗಳು ಮಧ್ಯಪ್ರವೇಶಿಸಿ ಅಧಿಕಾರಿಗಳ ದಿಢೀರ್ ಕ್ರಮವನ್ನು  ಪ್ರತಿಭಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಟೋ ರಿಕ್ಷಾಗಳಿಗೆ ಮಾತ್ರವೇ ಸಂಚರಿಸಬಹುದಾದಷ್ಟು ಸ್ಥಳಾವಕಾಶ ಏರ್ಪಡಿಸಿ ಸೇತುವೆಯ ಎರಡೂ ಬದಿಗಳನ್ನು ಮುಚ್ಚಲಾಗಿದೆ. ಇದರಿಂದ ಘನ ವಾಹನಗಳ  ಸಂಚಾರ ಪೂರ್ಣವಾಗಿ ಮೊಟಕುಗೊಂಡಿದೆ.

ಕುಂಬಳೆಯಿಂದ ಕಂಚಿಕಟ್ಟೆ-ಕೊಡ್ಯಮ್ಮೆ-ಕಳತ್ತೂರು-ಕಟ್ಟತ್ತಡ್ಕ ಭಾಗಕ್ಕೆ ತೆರಳುವ   ರಸ್ತೆ ಇದಾಗಿದೆ. ಕುಂಬಳೆಯಿಂದ ಕಟ್ಟತ್ತಡ್ಕಕ್ಕೆ ತೆರಳಲು ಸುಲಭ ದಾರಿಯೂ ಇದಾಗಿದೆ. ಸೇತುವೆ ಆರು ವರ್ಷಗಳ ಹಿಂದೆಯೇ ಅಪಾಯಕಾರಿಯೆಂದು ತಿಳಿದು ಅಧಿಕಾರಿಗಳು ಅಲ್ಲಿ ಸೂಚನಾ ಫಲಕ ಸ್ಥಾಪಿಸಿದ್ದರು. ಆದರೆ ಅನಂತರವೂ ಇದೇ ಸೇತುವೆ ಮೂಲಕ ಕಲ್ಲಿನ ಲಾರಿಗಳ ಸಹಿತ ಘನ ವಾಹನಗಳು ಸಂಚರಿಸುತ್ತಿದ್ದವು. ಇತ್ತೀಚೆಗೆ ಜಿಲ್ಲಾಧಿಕಾರಿ ತಲುಪಿ ಸೇತುವೆಯನ್ನು ನೇರವಾಗಿ ಸಂದರ್ಶಿಸಿದ ಬಳಿಕ ಸೇತುವೆ ಮೂಲಕದ ವಾಹನ ಸಂಚಾರ ತಡೆಯಲು ನಿರ್ದೇಶಿಸಲಾಗಿದೆ. ಆದರೆ ಅನಂತರವೂ ತಿಂಗಳುಗಳು ಕಳೆದ ಬಳಿಕ ಸೇತುವೆ ಮೂಲಕ ವಾಹನ ಸಂಚಾರಕ್ಕೆ ತಡೆಯೊಡ್ಡಲು ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಆರು ವರ್ಷಗಳ ಹಿಂದೆಯೇ ಅಪಾಯಕಾರಿಯೆಂದು ತಿಳಿಯಲಾದ ಸೇತುವೆ ದುರಸ್ತಿಗೊಳಿ ಸಲು ಅಥವಾ ಹೊಸ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳದೆ ಇದೀಗ ದಿಢೀರ್ ಸೇತುವೆ ಮುಚ್ಚುಗಡೆಗೊಳಿ ಸಲು  ಅಧಿಕಾರಿಗಳು ಮುಂದಾಗಿ ರುವುದು ಸಮಸ್ಯೆಗೆ ಕಾರಣವಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುವ ಈ ಸಮಯದಲ್ಲೇ ಸೇತುವೆ ಪೂರ್ಣವಾಗಿ ಮುಚ್ಚುಗಡೆಗೊಳಿಸಿದರೆ ವಿದ್ಯಾರ್ಥಿಗಳು ಶಾಲೆಗ ಹೇಗೆ ತೆರಳುವುದೆಂದು ನಾಗರಿಕರು ಪ್ರಶ್ನಿಸಿದ್ದಾರೆ.  ನಾಗರಿಕರ ದೂರುಗಳನ್ನು ಆಲಿಸಿದ ಬಳಿಕ ಆಟೋ ರಿಕ್ಷಾಕ್ಕೆ ಮಾತ್ರ ಸಂಚರಿಸಲು ಸೇತುವೆ ಮೇಲೆ  ಅವಕಾಶವೊದಗಿಸಲಾಗಿದೆ.

You cannot copy contents of this page