ಅಪಾಯಕಾರಿ ರೀತಿಯಲ್ಲಿ ಕಾರು ಚಲಾಯಿಸಿ ರೀಲ್ಸ್ ಚಿತ್ರೀಕರಣ ಅಪರಿಮಿತ ವೇಗದಲ್ಲಿ ಸಂಚರಿಸಿದ ಕಾರನ್ನು ಪೊಲೀಸರು ಬೆನ್ನಟ್ಟಿ ಸೆರೆ

ಕುಂಬಳೆ: ಅಪಾಯಕಾರಿ ರೀತಿಯಲ್ಲಿ ಫೋರ್ಚುನರ್ ಕಾರು ಚಲಾಯಿಸಿ ರೀಲ್ಸ್ ಚಿತ್ರೀಕರಿಸುತ್ತಿದ್ದ ತಂಡದ ಓರ್ವನನ್ನು ಪೊಲೀಸರು ಬೆನ್ನಟ್ಟಿ ಸೆರೆಹಿಡಿದಿದ್ದಾರೆ. ಕಾರು ಚಲಾಯಿಸಿದ ವ್ಯಕ್ತಿ ಸೆರೆಗೀಡಾಗಿದ್ದು, ಆತನನ್ನು ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.

ಉಪ್ಪಳ ಸೋಂಕಾಲು ಕೋಡಿ ಬೈಲಿನ ಮುಹಮ್ಮದ್ ರಿಯಾಸ್ (19) ಎಂಬಾತ ಸೆರೆಗೀಡಾದ ವ್ಯಕ್ತಿ. ನಿನ್ನೆ ಸಂಜೆ ೫.೩೦ರ ವೇಳೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ.

ಸೀತಾಂಗೋಳಿ-ಮಾಯಿಪ್ಪಾಡಿ ರಸ್ತೆಯಲ್ಲಿ ರಾಜಸ್ತಾನ್ ಮಾರ್ಬಲ್ ಸಮೀಪದ ಮೈದಾನದಲ್ಲಿ ಘಟನೆ ನಡೆದಿದೆ. ಕಾರನ್ನು ಅಪಾಯಕಾರಿ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿದ್ದುದಾಗಿ ದೂರಲಾಗಿದೆ. ವಿಷಯ ತಿಳಿದು ಕುಂಬಳೆ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಎಸ್‌ಐ ಕೆ. ಶ್ರೀಜೇಶ್ ಎಂಬಿವರ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿದಾಗ ಕಾರನ್ನು ಅಪರಿಮಿತ ವೇಗದಲ್ಲಿ ಚಲಾಯಿಸಿ ತಂಡ ಪರಾರಿಯಾಗಿತ್ತು. ಕಾರನ್ನು ಪೊಲೀಸರು ಬೆನ್ನಟ್ಟಿ  ಅನಂತಪುರ ದಿಂದ ವಶಪಡಿಸಿಕೊಂಡಿದ್ದಾರೆ.

ಈ ಹಿಂದೆ ಕುಂಬಳೆ ಶಾಲೆ ಮೈದಾನ ಸಮೀಪ ಹಾಗೂ ಪಚ್ಚಂಬಳದಲ್ಲೂ  ಇದೇ ರೀತಿಯ ರೀಲ್ಸ್ ಚಿತ್ರೀಕರಣ ನಡೆಸಲಾಗಿತ್ತು. ಪಚ್ಚಂಬಳದಲ್ಲಿ ಚಿತ್ರೀಕರಣ ವೇಳೆ ಥಾರ್ ಜೀಪು ಬೆಂಕಿ ತಗಲಿ ಉರಿದು ನಾಶಗೊಂಡಿತ್ತು. ಅದೃಷ್ಟವಶಾತ್ ಅಂದು ಯಾರೂ ಗಾಯಗೊಂಡಿರಲಿಲ್ಲ. ಅಪಾಯಕಾರಿ ರೀತಿಯಲ್ಲಿ ರೀಲ್ಸ್ ಚಿತ್ರೀಕರಣ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ತಿಳಿಸಿದ್ದಾರೆ.

You cannot copy contents of this page