ಅಬಕಾರಿ ಕಚೇರಿಗಳಿಗೆ ವಿಜಿಲೆನ್ಸ್ ದಾಳಿ, ಅನಧಿಕೃತ ದಾಸ್ತಾನು ಪತ್ತೆ
ಕಾಸರಗೋಡು: ಓಣಂ ಹಬ್ಬ ಇನ್ನೇನು ಸಮೀಪಿಸುತ್ತಿರುವಂತೆ ಅದರ ಹೆಸರಲ್ಲಿ ಹೊರಗಿನಿಂದ ರಾಜ್ಯಕ್ಕೆ ಅಕ್ರಮ ಮದ್ಯದ ಹೊಳೆ ಹರಿದು ಬರುತ್ತಿರುವುದನ್ನು ತಡೆಗಟ್ಟಲು ಅಬಕಾರಿ ಇಲಾಖೆ ಆರಂಭಿಸಿರುವ ಕಾರ್ಯಾಚರಣೆಗಳ ಬಗ್ಗೆ ಪರಿಶೀಲನೆ ನಡೆಸಲು ಕಾಸರಗೋಡು ವಿಜಿಲೆನ್ಸ್ (ಜಾಗ್ರತದಳ)ದ ನೇತೃತ್ವದಲ್ಲಿ ಕಾಸರಗೋಡು ಜಿಲ್ಲೆಯ ಐದು ಅಬಕಾರಿ ಕಚೇರಿಗಳಿಗೆ ಆಪರೇಷನ್ ಕೋಕ್ಟ್ವೆಲ್ನಂತೆ ಮಿಂಚಿನ ದಾಳಿ ನಡೆಸಲಾಗಿದೆ.
ಈ ದಾಳಿ ಮತ್ತು ತಪಾಸಣೆಯಲ್ಲಿ ಕೆಲವು ಅಬಕಾರಿ ಕಚೇರಿಗಳಲ್ಲಿ ಕೆಲವೊಂದು ಅವ್ಯವಹಾರಗಳು ಪತ್ತೆಹಚ್ಚಲಾಗಿದೆ ಎಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕೆಲವು ಕಚೇರಿಗಳಲ್ಲಿ ಕೆಲವು ಸಾಮಗ್ರಿಗಳನ್ನು ಅನಧಿಕೃತವಾಗಿ ದಾಸ್ತಾನು ಇರಿಸಿರುವುದನ್ನೂ ಪತ್ತೆಹಚ್ಚಲಾಗಿದೆ. ವಿಜಿಲೆನ್ಸ್ ದಾಳಿ ನಡೆಸಿದ ವೇಳೆ ಕೆಲವು ಅಬಕಾರಿ ಕಚೇರಿಗಳಲ್ಲಿ ಸಂಬಂಧಪಟ್ಟ ಅಬಕಾರಿ ಅಧಿಕಾರಿಗಳು ಆ ಕಚೇರಿಯಲ್ಲಿ ಇರಲಿಲ್ಲವೆಂಬುದೂ ಪತ್ತೆಯಾಗಿದೆ ಎಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ವಿಜಿಲೆನ್ಸ್ ನಿರ್ದೇಶಕ ಕೆ. ವಿನೋದ್ ಕುಮಾರ್ ಅವರು ನೀಡಿದ ನಿರ್ದೇಶ ಪ್ರಕಾರ ಕಲ್ಲಿಕೋಟೆ ರೇಂಜ್ ಸುಪರಿಂಟೆಂಡೆಂಟ್ ಪ್ರಜೀಶ್ ತೋಟತ್ತಿಲ್ರ ಮೇಲ್ನೋಟದಲ್ಲಿ ವಿಜಿಲೆನ್ಸ್ನ ಐದು ತಂಡಗಳು ಈ ವಿಜಿಲೆನ್ಸ್ ದಾಳಿ ನಡೆಸಿವೆ. ಇದರಂತೆ ಕಾಸರಗೋಡು ಎಕ್ಸೈಸ್ ಡಿವಿಷನಲ್ ಕಚೇರಿಗೆ ಕಾಸರಗೋಡು ವಿಜಿಲೆನ್ಸ್ ಡಿವೈಎಸ್ಪಿ ವಿ.ಕೆ. ವಿಶ್ವಂಭರನ್ರ ನೇತೃತ್ವದಲ್ಲಿ ದಾಳಿ ಮತ್ತು ತಪಾಸಣೆ ನಡೆಸಲಾಗಿದೆ.
ಇನ್ನು ಬದಿಯಡ್ಕ ಅಬಕಾರಿ ರೇಂಜ್ ಕಚೇರಿಗೆ ವಿಜಿಲೆನ್ಸ್ ಇನ್ಸ್ಪೆಕ್ಟರ್ ಸುನುಮೋನ್ರ ನೇತೃತ್ವದಲ್ಲೂ, ಕುಂಬಳೆ ರೇಂಜ್ ಕಚೇರಿಗೆ ಇನ್ಸಪೆಕ್ಟರ್ ಪಿ. ಸುನಿಲ್ ಕುಮಾರ್ರ ನೇತೃತ್ವದಲ್ಲಿ ಮತ್ತು ಹೊಸದುರ್ಗ ರೇಂಜ್ ಕಚೇರಿಯಲ್ಲಿ ಇನ್ಸ್ಪೆಕ್ಟರ್ ಎಂ.ವಿ. ರಾಜೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಇದರ ಹೊರತಾಗಿ ನೀಲೇಶ್ವರ ಅಬಕಾರಿ ರೇಂಜ್ ಕಚೇರಿಯಲ್ಲಿ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಇಂತಹ ಮಿಂಚಿನ ದಾಳಿ ಇನ್ನು ಮುಂದೆಯೂ ನಡೆಯಲಿದೆ ಎಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ನಡೆಸಿ ಅದರ ಆಧಾರದಲ್ಲಿ ತಯಾರಿಸುವ ವರದಿಯನ್ನು ಶೀಘ್ರ ರಾಜ್ಯ ವಿಜಿಲೆನ್ಸ್ ನಿರ್ದೇಶಕರಿಗೆ ಸಲ್ಲಿಸಲಾಗುವುದು. ಅದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗು ವುದೆಂದೂ ಅಧಿಕಾರಿಗಳು ತಿಳಿಸಿದ್ದಾರೆ.