‘ಅಮ್ಮ’ವನ್ನು ವಿಸರ್ಜಿಸಿದ ಬೆನ್ನಲ್ಲೇ ನಟ ಸಿದ್ದಿಕ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲು
ತಿರುವನಂತಪುರ: ಹೇಮಾ ಸಮಿತಿಯ ವರದಿಯ ಹಿನ್ನೆಲೆಯಲ್ಲಿ ಮಲಯಾಳಂ ಚಲನಚಿತ್ರ ಕಲಾವಿದರ ಸಂಘಟನೆಯಾದ ‘ಅಮ್ಮ’ದ ಅಧ್ಯಕ್ಷ ನಟ ಮೋಹನ್‌ಲಾಲ್ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಂಘಟನೆಯನ್ನೇ ವಿಸರ್ಜಿಸಿದ ಬೆನ್ನಲ್ಲೇ ನಟ ಸಿದ್ದಿಕ್ ವಿರುದ್ಧ ಪೊಲೀಸರು ಲೈಂಗಿಕ ಕಿರುಕುಳ (ಅತ್ಯಾಚಾರ) ಆರೋಪದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿದ್ದಿಕ್ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ನಟಿ ಯೋರ್ವೆ ಇ-ಮೇಲ್ ಮೂಲಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಳು. ಅದರ ಆಧಾರದಲ್ಲಿ ವಿಶೇಷ ಪೊಲೀಸ್ ತನಿಖಾ ತಂಡ ಸಿದ್ದಿಕ್ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಅಮ್ಮ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿದ್ದಿಕ್ ತಮ್ಮ ಮೇಲೆ ಲೈಂಗಿಕ ಕಿರುಕುಳ ಆರೋಪ ಉಂಟಾದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಾತ್ರವಲ್ಲ ತನ್ನ ವಿರುದ್ಧ ದೂರು ನೀಡಿದ ನಟಿ ವಿರುದ್ಧವೂ ಸಿದ್ದಿಕ್ ಇನ್ನೊಂದೆಡೆ ದೂರು ನೀಡಿದ್ದರು. ತನ್ನ ವಿರುದ್ಧ ನೀಡಲಾಗಿರುವ ದೂರು ಸುಳ್ಳು ಎಂದು ಅವರು ಹೇಳಿದ್ದಾರೆ.
ಕೇಸು ದಾಖಲಿಸಿಕೊಂಡ ಬೆನ್ನಲ್ಲೇ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಯತ್ನದಲ್ಲಿ ಸಿದ್ದಿಕ್ ತೊಡಗಿದ್ದಾರೆ. ೨೦೧೬ರಲ್ಲಿ ತಿರುವನಂತಪುರದ ಹೋಟೆಲೊಂದರಲ್ಲಿ ಸಿದ್ದಿಕ್ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ನಟಿ ಆರೋಪಿಸಿದ್ದಳು. ಅದರಂತೆ ಭಾರತೀ ಯ ನ್ಯಾಯಸಂಹಿತೆಯ ಸೆಕ್ಷನ್ 376 ಮತ್ತು 509ರ ಅಡಿ ಪೊಲೀಸರು ಸಿದ್ದಿಕ್ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ರೀತಿ ನಟ ಹಾಗೂ ಸಿಪಿಎಂ ಶಾಸಕನೂ ಆಗಿರುವ ಎಂ. ಮುಖೇಶ್, ನಟರಾದ ಬಾಬುರಾಜ್, ಜಯಸೂರ್ಯ, ನಿರ್ದೇಶಕ ರಂಜಿತ್ ಎಂಬವರ ವಿರುದ್ಧವೂ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದ್ದು, ಆ ವಿಷಯದಲ್ಲಿ ಪೊಲೀಸ್ ಕ್ರಮ ಉಂಟಾಗಲಿದೆಯೇ ಎನ್ನುವುದು ಇನ್ನಷ್ಟೇ ಕಾದು ನೋಡಬೇಕಾಗಿದೆ.
ಸಿನೆಮಾ ನಟರ ಮೇಲೆ ಲೈಂಗಿಕ ಆರೋಪ ಕೇಳಿ ಬಂದ ನಡುವೆಯೇ ಮಲಯಾಳಂ ಸಿನೆಮಾ ಕಲಾವಿದರ ಸಂಘಟನೆಯಾದ ಎ.ಎಂ.ಎಂ.ಎ (ಅಮ್ಮ)ದ ಅಧ್ಯಕ್ಷ ಸ್ಥಾನಕ್ಕೆ ನಟ ಮೋಹನ್‌ಲಾಲ್ ನಿನ್ನೆ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೇ ‘ಅಮ್ಮ’ದ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲಾಗಿದ್ದು, ಸದ್ಯ ಹಂಗಾಮಿ ಸಮಿತಿಗೆ ರೂಪು ನೀಡಲಾಗಿದೆ.