ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ವಿದ್ಯುತ್ ಸಂಪರ್ಕ: ಬಳಕೆದಾರರ ಹಕ್ಕು ಕಾನೂನಿನಲ್ಲಿ ಶೀಘ್ರ ತಿದ್ದುಪಡಿ
ಕಾಸರಗೋಡು: ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಇನ್ನು ವಿದ್ಯುತ್ ಸಂಪರ್ಕ ಲಭಿಸಲಿದೆ. ಇದಕ್ಕಾಗಿ ವಿದ್ಯುತ್ ಬಳಕೆದಾರರ ಹಕ್ಕು ಕಾನೂನಿನಲ್ಲಿ ಅಗತ್ಯದ ತಿದ್ದುಪಡಿ ತಂದು ಕರಡು ಮಸೂದೆಯನ್ನು ಕೇಂದ್ರ ಇಂಧನ ಸಚಿವಾಲಯ ಪ್ರಕಟಿಸಿದೆ. ಈ ತಿದ್ದುಪಡಿ ಕಾನೂನು ಜ್ಯಾರಿಗೊಳ್ಳುವ ಮೂಲಕ ಮೆಟ್ರೋ ನಗರಗಳಲ್ಲಿ ಅರ್ಜಿ ಸಲ್ಲಿಸಿದ ಕೇವಲ ಮೂರು ದಿನಗಳೊಳಗೆ, ನಗರಸಭೆಗಳಲ್ಲಿ ಏಳು ದಿನಗಳೊಳಗೆ ಹಾಗೂ ಪಂಚಾಯತ್‌ಗಳಲ್ಲಿ ೧೫ ದಿನಗಳೊಳಗಾಗಿ ವಿದ್ಯುತ್ ಸಂಪರ್ಕ ಲಭಿಸಲಿದೆ. ಕೇರಳದಲ್ಲಿ ಜ್ಯಾರಿಯಲ್ಲಿ ವಿದ್ಯುತ್ ಕಂಬಗಳು ಅಗತ್ಯವಿಲ್ಲದ ವಿದ್ಯುತ್ ಸಂಪರ್ಕವನ್ನು ಅರ್ಜಿ ಸಲ್ಲಿಸಿದ ೩೦ ದಿನಗಳೊಳಗಾಗಿ ನೀಡಲಾಗುತ್ತಿದೆ.
ಇನ್ನು ವಿದ್ಯುತ್ ಕಂಬಗಳು ಅಗತ್ಯವಿರುವ ಸಂಪರ್ಕಗಳಿಗೆ ಅಗತ್ಯದ ವಿದ್ಯುತ್ ಕಂಬಗಳನ್ನು ಸ್ಥಾಪಿಸಿ ಸಂಪರ್ಕ ನೀಡಲು ೪೫ ದಿನಗಳ ತನಕ ಕಾಯಬೇಕಾಗಿ ಬರುತ್ತಿದೆ. ಕೇಂದ್ರ ಸರಕಾರ ಜ್ಯಾರಿಗೆ ತರಲಿರುವ ತಿದ್ದುಪಡಿ ಕಾನೂನಿನಲ್ಲಿ ಯಾವ ಸಂಪರ್ಕವನ್ನು ಎಷ್ಟು ದಿನಗಳೊ ಳಗಾಗಿ ನೀಡಬೇಕೆಂಬುವುದರ ಬಗ್ಗೆ ಸಮಯವ್ಯಾಪ್ತಿಯನ್ನು ನಿಗದಿಪಡಿಸಲಾಗಿದೆ.
ಭವನ ಸಮುಚ್ಛಯಕ್ಕಾಗಿ ಇನ್ನು ಏಕ ಸಂಪರ್ಕ ನೀಡಲಾಗುವುದು. ಇದರಂತೆ ಹೌಸಿಂಗ್ ಕಾಲನಿಗಳು, ರೆಸಿಡೆನ್ಶಿಯಲ್ ವೆಲ್ಫೇರ್ ಅಸೋಸಿಯಶನ್‌ಗಳು ಮತ್ತಿತರ ಭವನ ಮನೆ ಸಮುಚ್ಛಯಗಳಿಗೆ ಇನ್ನು ಒಂದೇ ಸಂಪರ್ಕ ನೀಡಲಾಗುವುದು. ಆದರೆ ಮನೆಗಳಿಗೆ ವಿದ್ಯುತ್ ತಲುಪಿಸಲಿರುವ ವೆಚ್ಚವನ್ನು ವಸೂಲಿ ಮಾಡಬಹುದಾಗಿದೆ.