ಅರ್ಧ ಬೆಲೆಗೆ ಸಾಮಗ್ರಿಗಳ ಮಾರಾಟ ವಂಚನೆ: ರಾಜ್ಯದ ಹನ್ನೆರಡು ಕೇಂದ್ರಗಳಲ್ಲಿ ಇ.ಡಿ ದಾಳಿ
ಕೊಚ್ಚಿ: ಅರ್ಧ ಬೆಲೆಗೆ ಸ್ಕೂಟಿ, ಲ್ಯಾಪ್‌ಟಾಪ್ ಇತ್ಯಾದಿ ಸಾಮಗ್ರಿಗಳ ಮಾರಾಟದ ಹೆಸರಲ್ಲಿ ರಾಜ್ಯದ ಸಹಸ್ರಾರು ಮಂದಿಯಿಂದಾಗಿ ಕೋಟಿಗಟ್ಟಲೆ ರೂ. ಪಡೆದು ಬಳಿಕ ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇಡಿ- ಜಾರಿ ನಿರ್ದೇಶನಾಲಯ) ಇಂದು ರಾಜ್ಯದ ೧೨ ಕೇಂದ್ರಗಳಿಗೆ ಏಕಕಾಲದಲ್ಲಿ ಅನಿರೀಕ್ಷಿತವಾಗಿ ದಾಳಿ ಹಾಗೂ ತಪಾಸಣೆ ಆರಂಭಿಸಿದೆ. ಅರ್ಧ ಬೆಲೆಗೆ ಸಾಮಗ್ರಿಗಳನ್ನು ವಿತರಿಸಿ ವಂಚಿಸುತ್ತಿದ್ದ ಮರೆಯಲ್ಲಿ ಕಾಳಧನ ವ್ಯವಹಾರ ನಡೆದಿದೆಯೇ ಎಂಬುದನ್ನು ಪ್ರಧಾನವಾಗಿ ಪತ್ತೆಹಚ್ಚಲು ಇ.ಡಿ ಈ ದಾಳಿ ನಡೆಸುತ್ತಿದೆ.
ಈ ವಂಚನೆಗೆ ಸಂಬಂಧಿಸಿ ಕಾಳಧನ ವ್ಯವಹಾರ ಹಾಗೂ ಜೂಜಾಟ ಕಾನೂನಿನ ಪ್ರಕಾರ ಇ.ಡಿ ಈಗಾಗಲೇ ಕೇಸು ದಾಖಲಿಸಿದೆ. ಮಾತ್ರವಲ್ಲ ಅರ್ಧ ಬೆಲೆಗೆ ಸಾಮಗ್ರಿಗಳನ್ನು ಪಡೆಯಲು ಮುಂಗಡವಾಗಿ ಹಣ ಪಾವತಿಸಿ ಬಳಿಕ ವಂಚನೆಗೊಳಗಾದ ಹಲವರ ಹೇಳಿಕೆಗಳನ್ನೂ ಇಡಿ ದಾಖಲಿಸಿಕೊಂಡಿದೆ.
ಕೊಚ್ಚಿಯಲ್ಲೇ ಇಡಿ ಪ್ರಧಾನವಾಗಿ ಈ ದಾಳಿ ಮತ್ತು ತಪಾಸಣೆ ನಡೆಸುತ್ತಿದೆ. ಸುಮಾರು 60ರಷ್ಟು ಅಧಿಕಾರಿಗಳು ಒಳಗೊಂಡ ಇಡಿ ತಂಡ ಇಂದು ಮುಂಜಾನೆಯಿಂದಲೇ ಈ ದಾಳಿ ಮತ್ತು ಪರಿಶೀಲನೆ ಆರಂಭಿಸಿದ್ದು, ಅದು ಈಗಲೂ ಮುಂದುವರಿಯುತ್ತಿದೆ.
೧೫೯ ಕೋಟಿ ರೂ.ಗಳ ಆರ್ಥಿಕ ವ್ಯವಹಾರ ಈ ವಂಚನೆ ಮೂಲಕ ನಡೆಸಲಾಗಿದೆ ಎಂಬುವುದು ಈ ಬಗ್ಗೆ ನಡೆಸಲಾದ ಪ್ರಾಥಮಿಕ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಈ ವಂ ಚನಾ ಪ್ರಕರಣದ ಒಂದನೇ ಆರೋಪಿ ಅನಂತುಕೃಷ್ಣನ್, ಸತ್ಯಸಾಯಿಟ್ರಸ್ಟ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೆ.ಎನ್. ಆನಂದ್ ಕುಮಾರ್ ಎಂಬವರ ಮನೆ ಮತ್ತು ಕಚೇರಿಗಳು ಹಾಗೂ ಕಾಂಗ್ರೆಸ್ ನೇತಾರೆ ಲಾಲಿ ವಿನ್ಸೆಂಟ್‌ರ ಕೊಚ್ಚಿಯಲ್ಲಿರುವ ವಸತಿಯಲ್ಲಿ ಇಡಿ ಪ್ರಧಾನವಾಗಿ ದಾಳಿ ನಡೆಸುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಈ ವಂಚನೆಗೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲವೆಂದು ಲಾಲಿ ವಿನ್ಸೆಂಟ್ ಮತ್ತು ಆನಂದ್ ಕೃಷ್ಣನ್ ಹೇಳಿದ್ದಾರೆ.
ಈ ವ್ಯವಹಾರದಲ್ಲಿ ಕೋಟಿಗಟ್ಟಲೆ ರೂ.ಗಳ ಆರ್ಥಿಕ ವ್ಯವಹಾರ ನಡೆದಿದೆ. ಇದರಲ್ಲಿ ಹೆಚ್ಚಿನವುಗಳು ಕಾಳಧನ ವ್ಯವಹಾರಗಳ ಮೂಲಕ ನಡೆದಿದೆ ಯೆಂಬ ಶಂಕೆಯನ್ನು ಇಡಿ ವ್ಯಕ್ತಪಡಿಸಿದೆ.
ಇದರೊಂದಿಗೆ ಯಾವುದಾದರೂ ರಾಜಕೀಯ ನೇತಾರರು ಹಾಗೂ ಇತರ ಗಣ್ಯರ ನಂಟು ಹೊಂದಿದ್ದಾರೆಯೇ ಎಂಬ ಬಗ್ಗೆಯೂ ಇಡಿ ಸಮಗ್ರ ತನಿಖೆ ನಡೆಸುತ್ತಿದೆ. ಇನ್ನೊಂದೆಡೆ ಈ ಪ್ರಕರಣದ ಬಗ್ಗೆ ಕೇರಳ ಪೊಲೀಸ್ ಕ್ರೈಂ ಬ್ರಾಂಚ್ ಈಗಾಗಲೇ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.