ಆಂಟಿ ಬಯೋಟಿಕ್ ಮಾತ್ರೆಗಳು ಇನ್ನು ನೀಲಿ ಕವರ್‌ನಲ್ಲಿ
ಕಾಸರಗೋಡು: ಆಂಟಿ ಬಯೋಟಿಕ್ ಔಷಧಗಳನ್ನು ಪ್ರತ್ಯೇಕವಾಗಿ ಗುರುತಿಸುವ ಸಲುವಾಗಿ ಅವುಗಳನ್ನು ಇನ್ನು ನೀಲಿ ಕವರ್‌ಗಳಲ್ಲಿ ನೀಡುವಂತೆ ರಾಜ್ಯ ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್ ನಿರ್ದೇಶ ನೀಡಿದ್ದಾರೆ.
ಇದರಂತೆ ಮೊದಲ ಹಂತದಲ್ಲಿ ರಾಜ್ಯ ಡ್ರಗ್ಸ್ ಕಂಟ್ರೋಲ್ ಇಲಾಖೆ ೫೦ ಲಕ್ಷದಷ್ಟು ನೀಲಿ ಬಣ್ಣದ ಕವರ್‌ಗಳನ್ನು ತಯಾರಿಸಿ ಖಾಸಗಿ ಮೆಡಿಕಲ್ ಶಾಪ್‌ಗಳಿಗೆ ವಿತರಿಸಲಿದೆ. ನಂತರ ಅದೇ ಮಾದರಿಯಲ್ಲಿ ಮೆಡಿಕಲ್ ಶಾಪ್‌ಗಳೂ ಇಂತಹ ಕವರ್‌ಗಳನ್ನು ಸ್ವಂತವಾಗಿ ತಯಾರಿಸಿ ಅದರಲ್ಲಿ ಆಂಟಿಬಯೋಟಿಕ್ಸ್ ಔಷಧ ಸಾಮಗ್ರಿಗಳನ್ನು ವಿತರಿಸಬೇಕು. ಇದನ್ನು ಸರಕಾರಿ ಫಾರ್ಮಸಿಗಳಿಗೂ ಸಮಾನವಾಗಿ ಅನ್ವಯಗೊಳಿಸ ಲಾಗಿದೆ ಎಂದು ಸಚಿವೆ ತಿಳಿಸಿದ್ದಾರೆ. ಹೀಗೆ ತಯಾರಿಸಲಾಗುವ ಕವರ್‌ಗಳ ಹೊರ ಭಾಗದಲ್ಲಿ ಆಂಟೀ ಬಯೋ ಟಿಕ್ ಮದ್ದನ್ನು ಸೇವಿಸಬೇಕಾದ ರೀತಿ, ಅವುಗಳನ್ನು ಅಮಿತವಾಗಿ ಹಾಗೂ ಅವೈಜ್ಞಾನಿಕ ರೀತಿಯಲ್ಲಿ ಉಪಯೋಗಿಸಿದ್ದಲ್ಲಿ ಉಂಟಾಗುವ ವಿಪತ್ತುಗಳ ಕುರಿತಾದ ಮಾಹಿತಿ ಗಳನ್ನು ಮುದ್ರಿಸಲಾಗುವುದು. ಇಡೀ ದೇಶದಲ್ಲೇ ಇಂತಹ ಕ್ರಮ ಆರಂಭಿ ಸುವ ಪ್ರಥಮ ರಾಜ್ಯವಾಗಿದೆ ಕೇರಳ.
ಆಂಟಿಬಯೋಟೆಕ್ ಒಂದು ರೋಗ ಪ್ರತಿರೋಧಕ ಔಷಧವಾಗಿ ದ್ದರೂ, ಅವುಗಳ ಅಮಿತವಾದ, ಅವೈಜ್ಞಾನಿಕವಾದ ರೀತಿಯ ಉಪಯೋಗ ಬಾರೀ ಆರೋಗ್ಯ ಸಮಸ್ಯೆಗೂ ದಾರಿ ಮಾಡಿಕೊಡುತ್ತಿದೆ. ರಾಜ್ಯದಲ್ಲಿ ಆಂಟಿ ಬಯೋಟೆಕ್ ಔಷಧಿಗಳ ಮಾರಾಟ ಇತ್ತೀಚೆಗೆ ಹೆಚ್ಚಾಗತೊಡ ಗಿದ್ದು, ಅದನ್ನು ನಿಯಂತ್ರಿಸಲು ವೈದ್ಯರುಗಳ ಶಿಫಾರಸ್ಸು ಚೀಟಿ ಇದ್ದಲ್ಲಿ ಮಾತ್ರವೇ ಅವುಗಳನ್ನು ವಿತರಿಸಬಹುದೆಂಬ ನಿರ್ದೇಶವನ್ನು ರಾಜ್ಯ ಆರೋಗ್ಯ ಇಲಾಖೆ ರಾಜ್ಯದ ಎಲ್ಲಾ ಮೆಡಿಕಲ್ ಅಂಗಡಿಗಳಿಗೂ ಈಗಾಗಲೇ ನಿರ್ದೇಶ ನೀಡಿದೆ. ಈ ನಿರ್ದೇಶ ಪಾಲಿಸದ ಮದ್ದಿನಂಗಡಿಗಳ ಲೈಸನ್ಸ್ ರದ್ದು ಪಡಿಸುವ ಇತ್ಯಾದಿ ಕ್ರಮ ಗಳನ್ನು ಕೈಗೊಳ್ಳಲಾಗುವುದೆಂಬ ಮುನ್ನೆಚ್ಚರಿಕೆಯನ್ನೂ ರಾಜ್ಯ ಆರೋಗ್ಯ ಇಲಾಖೆ ನೀಡಿದೆ. ಇದರ ಫಲವಾಗಿ ರಾಜ್ಯದಲ್ಲಿ ಆಂಟಿ ಬಯೋಟಿಕ್ ಔಷಧಗಳ ಮಾರಾಟದಲ್ಲಿ ಈಗ ಭಾರೀ ಇಳಿಕೆ ಉಂಟಾಗಿದೆ.