ಆಟೋ ಚಾಲಕನ ಕೊಲೆ ಪ್ರಕರಣ: ರಿಮಾಂಡ್‌ನಲ್ಲಿರುವ ಆರೋಪಿಯನ್ನು ಕಸ್ಟಡಿಗೆ ತೆಗೆದು ಸಮಗ್ರ ತನಿಖೆಗೆ ನಿರ್ಧಾರ: ಚಾಕು ಬಾವಿಗೆಸೆದಿರುವುದಾಗಿ ಆರೋಪಿ ಹೇಳಿಕೆ
ಮಂಜೇಶ್ವರ: ಮಂಗಳೂರು ಮುಲ್ಕಿ ಬಳಿಯ ಕೊಲ್ನಾಡು ನಿವಾಸಿಯೂ, ಮಂಗಳೂರಿನಲ್ಲಿ ಆಟೋರಿಕ್ಷಾ ಚಾಲಕನಾದ ಮೊಹಮ್ಮದ್ ಶರೀಫ್ (52) ಎಂಬವರನ್ನು ಕೊಲೆಗೈದ ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂಡ್‌ನಲ್ಲಿರುವ ಸುರತ್ಕಲ್ ಬಳಿಯ ಕಲ್ಲಾಪುವಿನ ಅಭಿಷೇಕ್ ಶೆಟ್ಟಿ (25) ಎಂಬಾತನನ್ನು ಕಸ್ಟಡಿಗೆ ತೆಗೆದು ಸಮಗ್ರ ತನಿಖೆಗೊಳಪಡಿಸಲು ಪೊಲೀಸರು ಕ್ರಮ ಆರಂಭಿಸಿದ್ದಾರೆ. ಆರೋಪಿ ಕಸ್ಟಡಿಯಿಂದ ಲಭಿಸಲಿರುವ ಅರ್ಜಿ ಇಂದು ಸಲ್ಲಿಸಲು ಪೊಲೀಸರು ತೀರ್ಮಾನಿಸಿದ್ದಾರೆ. ಕೊಲೆ ಕೃತ್ಯಕ್ಕೆ ಬಳಸಿದ ಚಾಕುವನ್ನು ಪತ್ತೆಹಚ್ಚಲು ಹಾಗೂ ಕೊಲೆ ಕೃತ್ಯದಲ್ಲಿ ಇನ್ನಷ್ಟು ಮಾಹಿತಿಗಳನ್ನು ಸಂಗ್ರಹಿಸುವುದು ಪೊಲೀಸರ ಉದ್ದೇಶವಾಗಿದೆ. ಕಳೆದ ಗುರುವಾರ ಸಂಜೆ ವೇಳೆ ಮೊಹಮ್ಮದ್ ಶರೀಫ್‌ರ ಮೃತದೇಹ ಕುಂಜತ್ತೂರು ಬಳಿಯ ಅಡ್ಕಪಳ್ಳ ಮಾನಿಗುಡ್ಡೆ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿರುವ ಆವರಣರಹಿತ ಬಾವಿಯಲ್ಲಿ ಪತ್ತೆಯಾಗಿತ್ತು. ಬಾವಿ ಸಮೀಪದಲ್ಲೇ ಆಟೋ ರಿಕ್ಷಾ ಕೂಡಾ ಕಂಡು ಬಂದಿತ್ತು. ಸ್ಥಳದಲ್ಲಿ ಲಭಿಸಿದ ಪರ್ಸ್, ಲೈಸನ್ಸ್‌ನಿಂದ ಕೊಲೆಗೀಡಾದ ವ್ಯಕ್ತಿಯ ಗುರುತು ಪತ್ತೆಹಚ್ಚಲು ಸಾಧ್ಯವಾಯಿತು. ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಮೊಹಮ್ಮದ್ ಶರೀಫ್‌ರ ಸಾವು ಕೊಲೆ ಕೃತ್ಯವಾಗಿದೆ ಎಂದು ತಿಳಿದು ಬಂದಿತ್ತು.
ತಲೆ ಹಾಗೂ ಹಿಂಬದಿಗೆ ಉಂಟಾದ ಇರಿತದ ಗಾಯವೇ ಸಾವಿಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಕೊಲೆ ಕೃತ್ಯದ ಕುರಿತು ಸಮಗ್ರ ತನಿಖೆ ನಡೆಸುವ ಉದ್ದೇಶದಿಂದ ಡಿವೈಎಸ್‌ಪಿ ಸಿ.ಕೆ. ಸುನಿಲ್ ಕುಮಾರ್‌ರ ಮೇಲ್ನೋ ಟದಲ್ಲಿ ಮಂಜೇಶ್ವರ ಇನ್ಸ್‌ಪೆಕ್ಟರ್ ಇ. ಅನೂಪ್ ಕುಮಾರ್‌ರ ನೇತೃತ್ವದಲ್ಲಿ ಪ್ರತ್ಯೇಕ ತಂಡ ತನಿಖೆ ಆರಂಭಿಸಿದೆ. ಮೂರು ತಂಡಗಳಾಗಿ ತನಿಖೆ ಆರಂಭಿಸಲಾಯಿತು. ಮೃತದೇಹ ಪತ್ತೆಯಾದ ಬಾವಿಯಿಂದ ಸ್ವಲ್ಪ ದೂರದಲ್ಲಿರುವ ಇಂಟರ್‌ಲಾಕ್ ಫ್ಯಾಕ್ಟರಿಯ ಸಿಸಿಟಿವಿಯಿಂದ ಕೊಲೆ ಆರೋಪಿಯ ಕುರಿತಾಗಿ ಮೊದಲು ಸೂಚನೆ ಲಭಿಸಿದೆ. ಒಬ್ಬಾತ ಮದ್ಯದಮಲಿನಲ್ಲಿ ನಿಂತಿರುವುದು, ಈ ಮಧ್ಯೆ ಎರಡು ಬೈಕ್‌ಗಳಲ್ಲಾಗಿ ಮೂರು ಮಂದಿ ಆ ಭಾಗಕ್ಕೆ ಬರುವುದು ದೃಶ್ಯದಲ್ಲಿ ಕಂಡು ಬಂದಿದೆ. ಮದ್ಯದಮಲಿನಲ್ಲಿ ನಿಂತಿದ್ದ ವ್ಯಕ್ತಿ ಬೈಕ್‌ನಲ್ಲಿ ಹತ್ತಿ ಹೋಗುವುದು ಕೂಡಾ ದೃಶ್ಯದಲ್ಲಿದೆ. ಅಂದು ರಾತ್ರಿ ಬೈಕ್ ಸಹಿತ ತಲುಪಿದವರನ್ನು ಪತ್ತೆಹಚ್ಚಿ ಪೊಲೀಸರು ತನಿಖೆಗೊಳಪಡಿಸಿದ್ದರು. ಆದರೆ ಅವರಲ್ಲಿ ಯಾರೂ ಕೊಲೆಕೃತ್ಯದಲ್ಲಿ ಭಾಗಿಯಾಗಿಲ್ಲವೆಂದು ಪೊಲೀಸರು ದೃಢೀಕರಿಸಿದರು. ಬೈಕ್‌ನಲ್ಲಿ ಒಬ್ಬ ಹತ್ತಿರುವುದಾಗಿ ತಿಳಿಸಿದ ತಂಡ, ಆತನನ್ನು ಇಳಿಸಿದ ಸ್ಥಳವನ್ನು ಪೊಲೀ ಸರಿಗೆ ತೋರಿಸಿಕೊಟ್ಟಿದೆ. ಅನಂತರ ತಲಪಾಡಿಯಿಂದ ಮಂಗಳೂರು ವರೆಗಿನ ಹಲವು ಸ್ಥಳಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಮೊಹಮ್ಮದ್ ಶರೀಫ್‌ರ ಆಟೋ ರಿಕ್ಷಾ ಸಂಚರಿಸುತ್ತಿರುವ ದೃಶ್ಯ ಲಭಿಸಿದೆ. ರಿಕ್ಷಾದ ಹಿಂಬದಿ ಸೀಟಿನಲ್ಲಿ ಕುಳಿತಿರುವ ವ್ಯಕ್ತಿಯ ಮೊಣಕಾಲು ಮಾತ್ರವೇ ದೃಶ್ಯದಲ್ಲಿತ್ತು. ಕಪ್ಪು ಪ್ಯಾಂಟ್ ಹಾಗೂ ಕಪ್ಪು ಶೂ ಧರಿಸಿದ ವ್ಯಕ್ತಿಯಾಗಿದ್ದಾನೆಂದು ದೃಢೀಕರಿಸಲಾಯಿತು.
ಈ ಮಧ್ಯೆ ಆರೋಪಿ ಕುಂಪಳದ ಸ್ನೇಹಿತನ ಮನೆಯಲ್ಲಿ ನಿದ್ರಿಸಿದ ಬಳಿಕ ಬೆಳಿಗ್ಗೆ ಆಟೋ ರಿಕ್ಷಾದಲ್ಲಿ ಮಂಗಳೂರಿಗೆ ಮರಳಿದ್ದನು. ಹೇಳಿದ ಸ್ಥಳಕ್ಕೆ ತಲುಪಿದಾಗ ಬಾಡಿಗೆ ವಿಷಯದಲ್ಲಿ ಆಟೋಚಾಲಕನೊಂದಿಗೆ ಆರೋಪಿ ವಾಗ್ವಾದ ನಡೆಸಿದ್ದನು. ೫೦೦ ರೂ. ಸಾಲದು, ೪೦೦ ರೂ. ಇನ್ನೂ ಬೇಕೆಂದು ಆಟೋ ಚಾಲಕ ತಿಳಿಸಿದ್ದನು. ಈ ವೇಳೆ “ಒಬ್ಬನನ್ನು ಮುಗಿಸಿ ಬಂದಿದ್ದೇನೆ” ಎಂದು ತಿಳಿಸಿ ಅಭಿಷೇಕ್ ಶೆಟ್ಟಿ ಬೆದರಿಕೆಯೊಡ್ಡಿದ್ದನೆನ್ನಲಾಗಿದೆ. ಇದನ್ನು ಹಲವರು ಗಮನಿಸಿದ್ದರು. ಈ ವಿಷಯ ಪೊಲೀಸರಿಗೆ ಲಭಿಸಿದ್ದು, ಅದರ ಆಧಾರದಲ್ಲಿ ತನಿಖೆ ಮುಂದುವರಿಸಲಾಯಿತು. ಕೊಲೆ ಆರೋಪಿ ಬಾರ್‌ಗೆ ತಲುಪಿರುವ ಸಾಧ್ಯತೆ ಇದೆ ಎಂಬ ಸಂಶಯದಿಂದ ಪೊಲೀಸರು ಹಲವು ಬಾರ್‌ಗಳಿಗೆ ತಲುಪಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು. ಈ ಹಿಂದೆ ಲಭಿಸಿದ ದೃಶ್ಯಗಳಲ್ಲಿದ್ದ ಕಪ್ಪು ಪ್ಯಾಂಟ್, ಶೂ ಧರಿಸಿದ ವ್ಯಕ್ತಿಯ ಪೂರ್ಣರೂಪ ಬಾರ್‌ನ ದೃಶ್ಯಗಳಲ್ಲಿ ಕಂಡು ಬಂದಿದೆ. ಅನಂತರ ಆಟೋ ಚಾಲಕರ ಸಹಾಯದೊಂದಿಗೆ ನಡೆಸಿದ ತನಿಖೆಯಲ್ಲಿ ಮಂಜೇಶ್ವರ ಪೊಲೀಸರು ಕಲ್ಲಾಪುವಿನಲ್ಲಿರುವ ಅಭಿಷೇಕ್ ಶೆಟ್ಟಿಯ ಮನೆಗೆ ತಲುಪಿದರು. ಈ ಸಮಯದಲ್ಲಿ ಬಟ್ಟೆಬರೆಗಳೊಂದಿಗೆ ಮಹಾರಾಷ್ಟ್ರಕ್ಕೆ ಪರಾರಿಯಾಗಲಿರುವ ಸಿದ್ಧತೆಯಲ್ಲಿ ಅಭಿಷೇಕ್ ಶೆಟ್ಟಿ ತೊಡಗಿದ್ದನು. ಈತನನ್ನು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಿದಾಗ ಕೊಲೆ ಕೃತ್ಯದ ಪೂರ್ಣ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಈ ಹಿಂದೆ ಅಭಿಷೇಕ್ ಶೆಟ್ಟಿ ಶಾಲಾ ಬಸ್‌ನಲ್ಲಿ ಚಾಲಕನಾಗಿದ್ದನು. ಒಮ್ಮೆ ಮೊಹಮ್ಮದ್ ಶರೀಫ್‌ರ ಆಟೋರಿಕ್ಷಾ ಹಾಗೂ ಸ್ಕೂಲ್ ಬಸ್ ಒರೆಸಿದ್ದು, ಇದು ಅವರಿಬ್ಬರ ಮಧ್ಯೆ ದ್ವೇಷಕ್ಕೆ ಕಾರಣವಾಯಿತು.
ಅನಂತರ ಅವರಿಬ್ಬರು ಕಂಡಾಗಲೆಲ್ಲ ವಾಗ್ವಾದ ನಿತ್ಯ ಘಟನೆಯಾಯಿತು. ಈ ಮಧ್ಯೆ ಅಭಿಷೇಕ್ ಶೆಟ್ಟಿಯ ಕೆಲಸ ನಷ್ಟಗೊಂಡಿತು. ಇದಕ್ಕೆ ಕಾರಣ ಮೊಹಮ್ಮದ್ ಶರೀಫ್ ಆಗಿರುವುದಾಗಿ ಅಭಿಷೇಕ್ ಶೆಟ್ಟಿ ಸಂಶಯಿಸಿದ್ದನು. ಮೂರು ತಿಂಗಳ ಕಾಲ ನಡೆಸಿದ ಗೂಢ ತಂತ್ರದ ಬಳಿಕ ಕೊಲೆ ನಡೆಸಲು ಆತ ತೀರ್ಮಾನಿಸಿದ್ದಾನೆ. ತಲೆ ಕೂದಲು ಕತ್ತರಿಸಿ ಟೋಪಿ ಧರಿಸತೊಡಗಿದನು. ಘಟನೆ ದಿನದಂದು ರಾತ್ರಿ ೧೦ ಗಂಟೆ ವೇಳೆ ಆಟೋ ಸ್ಟಾಂಡ್‌ಗೆ ತಲುಪಿ ಮೊಹಮ್ಮದ್ ಶರೀಫ್‌ರ ಆಟೋ ರಿಕ್ಷಾಕ್ಕೆ ಹತ್ತಿ ತಲಪಾಡಿಗೆ ಹೋಗುವಂತೆ ತಿಳಿಸಿದ್ದನು. ಆದರೆ ಆಟೋ ಚಾಲಕನಿಗೆ ತನ್ನ ಗುರುತು, ಶಬ್ದ ತಿಳಿಯದ ರೀತಿಯಲ್ಲಿ ವರ್ತಿಸಿದ್ದನು. ತನ್ನ ಕಾರು ಅಪಘಾತಕ್ಕೀಡಾಗಿದೆ ಎಂದೂ, ಅದರಿಂದ ಸೌಂಡ್ ಸಿಸ್ಟಮ್ ತೆಗೆಯಲು ಹೋಗುತ್ತಿರುವುದಾಗಿಯೂ ಚಾಲಕನಲ್ಲಿ ತಿಳಿಸಿದ್ದನು. ತಲಪಾಡಿಗೆ ತಲುಪಿದಾಗ ವರ್ಕ್ ಶಾಪ್‌ವೊಂದರ ಸಮೀಪ ನಿಲ್ಲಿಸಿದ್ದ ಕಾರಿನಿಂದ ಒಂದು ಬ್ಯಾಗ್ ತೆಗೆದನು. ಅನಂತರ ಓರ್ವ ಸ್ನೇಹಿತನ ಮನೆಗೆ ತಲುಪಿಸಬೇಕೆಂದು ತಿಳಿಸಿ ಕುಂಜತ್ತೂರಿಗೆ ತಲುಪಿದನು. ಮಾನಿಗುಡ್ಡೆಗೆ ತಲುಪಿದ ಬಳಿಕ ಬ್ಯಾಗ್‌ನಲ್ಲಿರಿಸಿದ್ದ ಚಾಕು ತೆಗೆದು ಮೊಹಮ್ಮದ್ ಶರೀಫ್‌ರ ತಲೆಗೆ ಹಾಗೂ ಕುತ್ತಿಗೆ ಭಾಗಕ್ಕೆ ಇರಿದಿದ್ದಾನೆ. ತಡೆಯಲೆತ್ನಿಸಿದಾಗ ಕೈಗೂ ಗಾಯಗಳಾಗಿವೆ. ಈ ಮಧ್ಯೆ ಮೊಹಮ್ಮದ್ ಶರೀಫ್‌ರನ್ನು ಬಾವಿಗೆ ದೂಡಿ ಹಾಕಿರುವುದಾಗಿ ಆರೋಪಿಯಿಂದ ಹೇಳಿಕೆ ದಾಖಲಿಸಿಕೊಂಡಾಗ ಪೊಲೀಸರಿಗೆ ಮಾಹಿತಿ ಲಭಿಸಿದೆ. ಕೊಲೆ ಕೃತ್ಯ ನಡೆಯುವುದರ ಎರಡು ದಿವಸಗಳ ಹಿಂದೆ ಜೂಜಾಟಕ್ಕಾಗಿ ಈ ಸ್ಥಳಕ್ಕೆ ತಲುಪಿ ದ್ದುದಾಗಿ ಅಭಿಷೇಕ್ ಪೊಲೀಸರಲ್ಲಿ ತಿಳಿಸಿದ್ದಾನೆ. ಕೊಲೆ ಕೃತ್ಯದ ಬಳಿಕ ಚಾಕುವನ್ನು ಬಾವಿಗೆಸೆದಿರುವುದಾ ಗಿಯೂ ಆರೋಪಿ ತಿಳಿಸಿದ್ದಾನೆ. ಆದ್ದರಿಂದ ಆರೋಪಿಯನ್ನು ಕಸ್ಟಡಿಗೆ ತೆಗೆದ ಬಳಿಕ ಬಾವಿಯ ನೀರನ್ನು ಬತ್ತಿಸಿ ಶೋಧ ನಡೆಸಲು ಪೊಲೀಸರು ಆಲೋಚಿಸುತ್ತಿದ್ದಾರೆ.