ಆಟೋ ಚಾಲಕ ಆಸಿಡ್ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲು: ಬಾಲಕಿ ದೂರಿನಂತೆ ಪೋಕ್ಸೋ ಕೇಸು ದಾಖಲು

ಮುಳ್ಳೇರಿಯ: ಆಟೋ ಚಾಲಕ ನೋರ್ವ ಆಸಿಡ್ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ವಾಸಿಸುವ 22ರ ಹರೆಯದ ಯುವಕ ವಿಷ ಸೇವಿಸಿರುವುದಾಗಿ ತಿಳಿದು ಬಂದಿದೆ. ಈತನ ಎರಡೂ ಕಿಡ್ನಿಗಳು ಹಾನಿಗೀಡಾಗಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿರುವುದಾಗಿ ಹೇಳಲಾಗುತ್ತಿದೆ.

ಕಳೆದ ದಿನ ಆಟೋ ಚಾಲಕನಾದ ಯುವಕ ಆಸಿಡ್ ಸೇವಿಸಿದ ಸ್ಥಿತಿಯಲ್ಲಿ  ಪತ್ತೆಯಾಗಿದ್ದು, ಪ್ರೇಮ ವೈಫಲ್ಯವೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಆಸಿಡ್ ಸೇವಿಸಿ ಮನೆಯೊಂದಕ್ಕೆ ತಲುಪಿದ ಯುವಕ ವಾಂತಿ ಮಾಡಿರುವುದಾಗಿ ಹೇಳಲಾಗುತ್ತಿದೆ. ಈ ವಿಷಯವನ್ನು ಆ ಮನೆಯವರು ಯುವಕನ ಮನೆಯವರಿಗೆ ತಿಳಿಸಿದ್ದರು. ಕೂಡಲೇ ಸಂಬಂಧಿಕರು ತಲುಪಿ ಯುವಕನನ್ನು ಮೊದಲು ಬಂದಡ್ಕದ ಆಸ್ಪತ್ರೆಗೆ ತಲುಪಿಸಿದ್ದರು. ಸ್ಥಿತಿ ಗಂಭೀರವಾಗಿರುವುದರಿಂದ ಬಳಿಕ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಇದೇ ವೇಳೆ ೧೭ರ ಹರೆಯದ ಬಾಲಕಿ ನೀಡಿದ ದೂರಿನಂತೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಯುವಕನ ವಿರುದ್ಧ ಆದೂರು ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page