ಆಟೋ ರಿಕ್ಷಾ-ಬೈಕ್ ಢಿಕ್ಕಿ ಹೊಡೆದು ರಿಕ್ಷಾ ಪ್ರಯಾಣಿಕ ಮೃತ್ಯು: ಮೂವರಿಗೆ ಗಾಯ

ಪೈವಳಿಕೆ: ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನ ಢಿಕ್ಕಿ ಹೊಡೆದು ರಿಕ್ಷಾ ಪ್ರಯಾಣಿಕ ಮೃತಪಟ್ಟ ಘಟನೆ ಸಂಭವಿಸಿದೆ. ನಿನ್ನೆ ಸಂಜೆ ಬೆರಿಪದವು-ಪೆರುವಾಯಿ ಮಧ್ಯೆ ಅಪಘಾತ ಸಂಭವಿಸಿದೆ. ರಿಕ್ಷಾ ಪ್ರಯಾಣಿಕರಾಗಿದ್ದ ಬಾಯಾರು ಪೆರ್ವೋಡಿ ನಿವಾಸಿ ನಾಗೇಶ್ ಭಟ್ (೪೭) ಮೃತಪಟ್ಟವರು. ಇವರ ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ಆಲ್‌ಫೋನ್ ಡಿ’ಸೋಜಾ, ಅಣ್ಣು ಎಂಬವರಿಗೂ ಸಣ್ಣಪುಟ್ಟ ಗಾಯವುಂಟಾಗಿದೆ.

ಬೆರಿಪದವು ಭಾಗದಿಂದ ಪೆರುವಾಯಿಯತ್ತ ತೆರಳುತ್ತಿದ್ದ ಆಟೋ ರಿಕ್ಷಾ ಹಾಗೂ ಬೆರಿಪದವು ಭಾಗಕ್ಕೆ ಬರುತ್ತಿದ್ದ ಜೋಡುಕಲ್ಲು ನಿವಾಸಿಯಾದ ವಿನೋದ್ ಕುಮಾರ್  ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ ಸಂಭವಿಸಿದೆ. ಈ ವೇಳೆ ಆಟೋ ರಿಕ್ಷಾ ಮಗುಚಿದ್ದು, ತಲೆಗೆ, ಕೈಗೆ ಗಂಭೀರ ಗಾಯಗೊಂಡ ನಾಗೇಶ್ ಭಟ್ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಬೈಕ್ ಸವಾರನೂ ಗಾಯಗೊಂಡಿದ್ದಾರೆ.

ಮೃತ ನಾಗೇಶ್ ತಂದೆ ಸುರೇಶ್ ಭಟ್, ತಾಯಿ ಸುಮತಿ ಪತ್ನಿ ಸರೋಜಾ, ಪುತ್ರಿ ಮೀನಾಕ್ಷಿ, ಸಹೋದರರಾದ ಗಣೇಶ, ಹರೀಶ, ಸಹೋದರಿಯರಾದ ಶೋಭಾ, ಸುಷ್ಮಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED NEWS

You cannot copy contents of this page