ಆತ್ಮಹತ್ಯೆ ಯತ್ನ ವೇಳೆ ಹಗ್ಗ ತುಂಡಾಗಿ ಬಿದ್ದು ಗಾಯಗೊಂಡ ಯುವತಿ ಆಸ್ಪತ್ರೆಯಲ್ಲಿ ಮೃತ್ಯು

ಕುಂಬಳೆ: ಆತ್ಮಹತ್ಯೆಗೈಯ್ಯಲೆಂದು ನೇಣು ಬಿಗಿದಾಗ ಹಗ್ಗ ತುಂಡಾಗಿ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವತಿ ಮೃತಪಟ್ಟ ಘಟನೆ ನಡೆದಿದೆ.

ಬಂದ್ಯೋಡು ಅಡ್ಕ ಒಳಯಂ ರೋಡ್ ನಿವಾಸಿ ದಿ| ಮೂಸ ಎಂಬವರ ಪುತ್ರಿ  ಆಯಿಶತ್ ರಿಯಾನ (24) ಮೃತಪಟ್ಟ ಯುವತಿ. ಈ ತಿಂಗಳ 23ರಂದು ತಾಯಿ ಮನೆಯ ಬಾತ್‌ರೂಂನಲ್ಲಿ ಆಯಿಶತ್ ರಿಯಾನ ನೇಣು ಬಿಗಿದು ಆತ್ಮಹತ್ಯೆಗೈಯ್ಯಲು ಯತ್ನಿಸಿದ್ದಾಳೆನ್ನಲಾಗಿದೆ. ಈ ವೇಳೆ ಹಗ್ಗ ತುಂಡಾಗಿ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದಳು. ಕೂಡಲೇ ಆಕೆಯನ್ನು ದೇರಳಕಟ್ಟೆ ಆಸ್ಪತ್ರೆಯಲ್ಲಿ ತಲುಪಿಸಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಯುವತಿ ಆಸ್ಪತ್ರೆಯಲ್ಲಿ  ಮೃತಪಟ್ಟಳು.

ಮೃತಳು ತಾಯಿ ಸುಲೈಖ, ಪತಿ ಮಂಜೇಶ್ವರ ಬಟ್ಟಪದವಿನ ಬಶೀರ್, ಪುತ್ರ ಮೊಹಮ್ಮದ್ ಬಿಲಾಲ್ (ಎರಡೂವರೆ ವರ್ಷ) ಸಹೋದರಿಯರಾದ ತಸ್ರೀನ, ತಸ್ಲೀನ, ಸಫ್ವಾನ, ಸುಮಯ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳೆ.

ಆಯಿಶತ್ ರಿಯಾನಳ ಮದುವೆ ಮೂರೂವರೆ ವರ್ಷಗಳ ಹಿಂದೆ  ಬಶೀರ್‌ರೊಂದಿಗೆ ನಡೆದಿತ್ತೆನ್ನಲಾಗಿದೆ. ಈ ವೇಳೆ ೧೫ ಪವನ್ ಚಿನ್ನಾಭರಣ ನೀಡಲಾಗಿತ್ತೆನ್ನಲಾಗಿದೆ. ಇವರಿಗೆ ಎರಡೂವರೆ ವರ್ಷದ ಮೊಹಮ್ಮದ್ ಬಿಲಾಲ್ ಎಂಬ ಪುತ್ರನಿದ್ದಾನೆ. ಮಗು ಜನಿಸಿದ ಆರು ತಿಂಗಳ ಬಳಿಕ ಆಯಿಶತ್ ರಿಯಾನಳಿಗೆ ಪತಿ ಬಳಿಕ ಹಲ್ಲೆಗೈದು ಆಕೆಯನ್ನು ತಾಯಿ ಮನೆಗೆ ತಂದು ಬಿಟ್ಟಿದ್ದಾನೆಂದು ಆಯಿಶತ್ ರಿಯಾನಳ ತಂದೆಯ ಸಹೋದರ ಮೆಹಮೂದ್ ಅಡ್ಕ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಆಯಿಶತ್ ರಿಯಾನ ತಾಯಿ ಮನೆಯಲ್ಲೇ ಇದ್ದಳು. ಇದರಿಂದ ಕೆಲವು ತಿಂಗಳ ಹಿಂದೆ ಹಿರಿಯರು ಸೇರಿ ಮಾತುಕತೆ ನಡೆಸಿದ್ದರು. ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಬಶೀರ್ ಒಳಯಂನ ಮನೆಗೆ ತಲುಪಿ ಪತ್ನಿ ಹಾಗೂ ಮಗುವಿಗೆ ಖರ್ಚಿಗೆ ಹಣ ನೀಡುವಂತೆ ತಿಳಿಸಲಾಗಿತ್ತು.

ಕಳೆದ ವಾರ ಯುವತಿ ಬಶೀರ್‌ನ ಬಟ್ಯಪದವಿನ ಅಂಗಡಿಗೆ ತೆರಳಿ ತನಗೆ ವಾಸಕ್ಕೆ ಬಾಡಿಗೆ ಮನೆಯ ವ್ಯವಸ್ಥೆ ಮಾಡಿಕೊಡ ಬೇಕೆಂದು ತಿಳಿಸಿದ್ದಳೆನ್ನಲಾಗಿದೆ. ಆದರೆ ಅದನ್ನು ನಿರಾಕರಿಸಿ ಆಕೆ ಯನ್ನು ಮರಳಿ ಮನೆಗೆ ಕಳುಹಿಸಿ ದ್ದಾನೆಂದೂ ಮೆಹಮೂದ್ ಅಡ್ಕ ಆರೋಪಿಸಿದ್ದಾರೆ. ಈ ಹಿಂದೊಮ್ಮೆ ಬಶೀರ್‌ನ ಕಿರುಕುಳ ಸಹಿಸಲಾಗದೆ ಆತನ ಮನೆಯಲ್ಲೂ ಆಯಿಶತ್ ರಿಯಾನ ಆತ್ಮಹತ್ಯೆಗೆ ಯತ್ನಿಸಿದ್ದಳೆಂದೂ ಮೆಹಮೂದ್ ಆರೋಪಿಸಿದ್ದಾರೆ.

You cannot copy contents of this page