ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ 80.49 ಲಕ್ಷ ರೂ. ಲಪಟಾವಣೆ
ಕಾಸರಗೋಡು: ಆನ್‌ಲೈನ್ ವಂಚನೆಯ ಹೆಸರಲ್ಲಿ ಜನರ ಹಣ ನಷ್ಟಗೊಳ್ಳುತ್ತಿರುವುದು ಇತ್ತೀಚೆಗಿನಿಂದ ಇನ್ನಷ್ಟು ಹೆಚ್ಚಾಗತೊಡಗಿದೆ.
ಇದೇ ರೀತಿ ಆನ್‌ಲೈನ್ ಟ್ರೇಡಿಂಗ್ ವ್ಯಾಪಾರದ ಮೂಲಕ ಭಾರೀ ಲಾಭ ನೀಡುವ ಭರವಸೆ ನೀಡಿ ಅದರ ಹೆಸರಲ್ಲಿ ಚೆರ್ಕಳ ಪಾಡಿ ನಿವಾಸಿ ಯೋರ್ವರ 80.49 ಲಕ್ಷ ರೂ. ಎಗರಿಸಿದ ಘಟನೆಯೂ ನಡೆದಿದೆ.
ಪಾಡಿ ಕೂಳಕ್ಕೋಲು ಹೌಸಿನ ಇ. ಶ್ರೀಧರನ್ ಇಂತಹ ವಂಚನೆಗೊಳಗಾಗಿ ಹಣ ನಷ್ಟಗೊಂಡ ವ್ಯಕ್ತಿಯಾಗಿದ್ದಾರೆ. ಈ ಬಗ್ಗೆ ಅವರು ನೀಡಿದ ದೂರಿನಂತೆ ಎರಡು ಅಕೌಂಟ್‌ದಾರರ ವಿರುದ್ಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ಸೈಬರ್ ವಿಭಾಗದ ಪೊಲೀಸರ ಸಹಾಯದೊಂದಿಗೆ ತನಿಖೆ ಆರಂಭಿಸಿದ್ದಾರೆ.ಆನ್‌ಲೈನ್ ಟ್ರೇಡಿಂಗ್ ವ್ಯವಹಾರದಲ್ಲಿ ಭಾರೀ ಲಾಭ ನೀಡುವುದಾಗಿ ನಂಬಿಸಿ 61 ಧನ್‌ರೈಸ್ ಸೆಕ್ಯೂರಿಟೀಸ್ ಲರ್ನಿಂಗ್ ಆಂಡ್ ಗೈಡನ್ಸ್ ಎಂಬ ವಾಟ್ಸಪ್ ಗ್ರೂಪ್‌ನಲ್ಲಿ ಆನ್‌ಲೈನ್ ಟ್ರೇಡಿಂಗ್ ವ್ಯವಹಾರದಲ್ಲಿ ಠೇವಣಿ ಮಾಡಿದಲ್ಲಿ ಭಾರೀ ಲಾಭಾಂಶ ನೀಡುವುದಾಗಿ ಭರವಸೆ ನೀಡಲಾಗಿ ತ್ತೆಂದೂ, ಅದರಂತೆ ಅದರ ಬ್ಯಾಂಕ್ ಖಾತೆಗೆ ಮೇ 27ರಿಂದ ಜುಲೈ 15ರ ತನಕದ ಅವಧಿಯಲ್ಲಿ ತಾನು 80.49 ಲಕ್ಷ ರೂ. ಠೇವಣಿ ರೂಪದಲ್ಲಿ ಕಳುಹಿಸಿಕೊಟ್ಟಿದ್ದೆ. ಹೂಡಿದೆ. ಆದರೆ ಆ ಬಳಿಕ ಲಾಭಾಂಶವನ್ನಾಗಲೀ ತಾನು ನೀಡಿದ ಹಣವನ್ನೂ ಹಿಂತಿರುಗಿಸದೆ ತನ್ನನ್ನು ವಂಚಿಸಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಶ್ರೀಧರನ್ ತಿಳಿಸಿದ್ದಾರೆ.
ಒಂದು ತಿಂಗಳ ಹಿಂದೆ ಇದೇ ರೀತಿ ಪನಯಾಲ್ ನಿವಾಸಿ ಮರ್ಚೆಂಟ್ಸ್ ನೇವಿ ಸಿಬ್ಬಂದಿಯೋರ್ವರ 1.94 ಕೋಟಿ ರೂ. ಹಾಗೂ ಕೆಲವು ದಿನಗಳ ಹಿಂದೆ ಚೆರುವತ್ತೂರಿನ ಯುವತಿಯೋರ್ವೆಯ 41 ಲಕ್ಷ ರೂ.ವನ್ನು ಆನ್‌ಲೈನ್ ವ್ಯವಹಾರದ ಹೆಸರಲ್ಲಿ ಪಡೆದು ವಂಚನೆ ನಡೆಸಲಾಗಿತ್ತು.