ಆಯಂಪಾರದಲ್ಲಿ ಸತತ ಎರಡನೇ ದಿನವೂ ಚಿರತೆ ಪ್ರತ್ಯಕ್ಷ : ಬಾರ, ತಾಮರಕ್ಕುಳಿಯಲ್ಲೂ ಸ್ಥಳೀಯರು ಭೀತಿಯಲ್ಲಿ
ಕಾಸರಗೋಡು: ಪುಲ್ಲೂರು ಪೆರಿಯ ಪಂಚಾಯತ್‌ನ ಆಯಂಪಾರದಲ್ಲಿ ಸತತ ಎರಡನೇ ದಿನವೂ ಚಿರತೆ ಪ್ರತ್ಯಕ್ಷಗೊಂಡಿದೆ. ಗುರುವಾರ ಸಾಕಿದ ನಾಯಿಯನ್ನು ಕಚ್ಚಿ ಕೊಂದ ಸ್ಥಿತಿಯಲ್ಲಿ ಕಂಡು ಬಂದ ಆಯಂಪಾರ, ಮಾರಿಂಗಾವ್‌ನಲ್ಲಿ ನಿನ್ನೆ ರಾತ್ರಿಯೂ ಚಿರತೆ ಕಂಡು ಬಂದಿದೆ. ಬಂಡೆಯ ಮೇಲಿರುವ ಹೊಂಡದಿಂದ ನೀರು ಕುಡಿಯುವ ಚಿರತೆಯನ್ನು ಸ್ಥಳೀಯ ನಿವಾಸಿಯಾದ ಕಣ್ಣನ್ ಎಂಬವರು ನೋಡಿದ್ದಾರೆನ್ನಲಾಗಿದೆ. ಈ ಭಾಗಕ್ಕೆ ನೋಡಿ ನಾಯಿ ನಿರಂತರ ಬೊಗಳುತ್ತಿದ್ದ ಹಿನ್ನೆಲೆಯಲ್ಲಿ ಲೈಟ್ ಹಾಕಿ ನೋಡಿದಾಗ ಚಿರತೆ ಕಂಡು ಬಂದಿದ್ದು, ಇದೇ ವೇಳೆ ಬೊಬ್ಬೆ ಹೊಡೆದಾಗ ಪರಾರಿಯಾಗಿದೆ ಎನ್ನಲಾಗಿದೆ. ಮಾಹಿತಿ ತಿಳಿದು ಸ್ಥಳೀಯರು ಹಾಗೂ ಅರಣ್ಯ ಪಾಲಕರು ಸ್ಥಳಕ್ಕೆ ತಲುಪಿದ್ದಾರೆ. ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಶಾಜಿ ಎಂಬವರು ಕೂಡಾ ಚಿರತೆಯನ್ನು ಕಂಡಿದ್ದಾರೆನ್ನಲಾಗಿದೆ. ಜೀಪಿನ ಎದುರು ಮೂರು ಬಾರಿ ಚಿರತೆ ಅತ್ತಿತ್ತ ಓಡಿದೆ ಎಂದು ಶಾಜಿ ತಿಳಿಸಿದ್ದಾರೆ. ಈ ವಿಷಯವನ್ನು ಕೂಡಲೇ ಪೊಲೀಸರಿಗೆ ತಿಳಿಸುವುದಾಗಿ ಅವರು ನುಡಿದಿದ್ದಾರೆ.
ಗುರುವಾರ ರಾತ್ರಿ ಚಿರತೆಯ ಆಕ್ರಮಣದಿಂದ ಬಿಂದು ಎಂಬ ಮಹಿಳೆಯ ಮನೆಯ ಸಾಕುನಾಯಿ ಸತ್ತಿತ್ತು. ಈ ಮನೆಗೆ ತೆರಳುತ್ತಿದ್ದಾಗ ಶಾಜಿ ಚಿರತೆಯನ್ನು ಕಂಡಿದ್ದಾರೆ. ಬೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾರ, ತಾಮರಕ್ಕುಳಿಯಲ್ಲೂ ನಿನ್ನೆ ರಾತ್ರಿ ಚಿರತೆ ಕಂಡಿರುವುದಾಗಿ ಸ್ಥಳೀಯರು ತಿಳಿಸಿದ್ದು, ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಶೀಲಿಸಿದರು. ತಾಮರಕ್ಕುಳಿ ಹಾಗೂ ಆಯಂಪಾರದಲ್ಲಿ ಏಕ ಕಾಲದಲ್ಲಿ ಚಿರತೆಗಳನ್ನು ಕಂಡಿರುವುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ.