ಆರೋಪಿಯ ಸೆರೆ ಹಿಡಿಯಲು ಹೋದ ಪೊಲೀಸರ ಮೇಲೆ ಗುಂಡು ಹಾರಾಟ
ಕಣ್ಣೂರು: ಆರೋಪಿಯನ್ನು ಸೆರೆ ಹಿಡಿಯಲು ಹೋದ ಪೊಲೀಸರ ಮೇಲೆ ಗುಂಡು ಹಾರಿಸಿದ ಘಟನೆ ಕಣ್ಣೂರಿನ ಚಿರಕ್ಕಲ್ ಎಂಬಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ಓರ್ವನನ್ನು ಪೊಲೀಸರು ಸೆರೆ ಹಿಡಿದಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ. ನಿನ್ನೆ ರಾತ್ರಿ ೧೦ ಗಂಟೆ ವೇಳೆ ಘಟನೆ ನಡೆದಿದೆ. ತಮಿಳುನಾಡು ನಿವಾಸಿಗೆ ಅಕ್ರಮಿಸಿದ ಪ್ರಕರಣದಲ್ಲಿ ಆರೋಪಿಯಾದ ರೋಶನ್ ಎಂಬಾತನನ್ನು ಸೆರೆ ಹಿಡಿಯಲು ವಳಪಟ್ಟಣಂ ಎಸ್.ಐ. ನಿತಿನ್‌ರ ನೇತೃತ್ವದ ಪೊಲೀಸರು ಚಿರಕ್ಕಲ್ ಚಿರದಲ್ಲಿರುವ ಆರೋಪಿಯ ಮನೆಗೆ ತೆರಳಿದ್ದಾರೆ. ಎರಡಂತಸ್ತಿನ ಮನೆಯ ಹಿಂಭಾಗದ ಮೆಟ್ಟಿಲಿನ ಮೂಲಕ ಮೇಲಕ್ಕೇರಿದ ಪೊಲೀಸರು ರೋಶನ್‌ನ ಕೊಠಡಿ ಬಾಗಿಲು ತಟ್ಟಿದ್ದಾರೆ. ಈ ವೇಳೆ ರೋಶನ್‌ನ ತಂದೆ ಬಾಬು ತೋಮಸ್ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಎಸ್‌ಐ ಸಹಿತ ಪೊಲೀಸರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ ರೋಶನ್ ಓಡಿ ಪರಾರಿಯಾಗಿ ದ್ದಾನೆ. ಗುಂಡು ಹಾರಿಸಿದ ಬಾಬು ತೋಮಸ್‌ನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಆರೋಪಿಯನ್ನು ಬಂಧಿಸಿದ್ದಾರೆ. ತಮಿಳುನಾಡು ನಿವಾಸಿಯಾದ ಬಾಲಾಜಿ ಎಂಬವರಿಗೆ ಅ. ೨೨ರಂದು ಪೇಪರ್ ಕಟ್ಟರ್ ನಿಂದ ಆಕ್ರಮಿಸಿದ ಪ್ರಕರಣದಲ್ಲಿ ರೋಶನ್ ಆರೋಪಿಯಾಗಿದ್ದಾನೆ. ಹಲವು ಪ್ರಕರಣಗಳಲ್ಲಿ ಆರೋಪಿಯಾದ ಈತನ ವಿರುದ್ಧ ಕರ್ನಾಟಕದಲ್ಲೂ ಕೇಸಿದೆಯೆಂದು ಪೊಲೀಸರು ತಿಳಿಸಿದ್ದಾರೆ.