ಆವರಣಗೋಡೆಯಿಲ್ಲದ ಸಾರ್ವಜನಿಕ ಬಾವಿ ದುರಸ್ತಿಗೆ ಕ್ರಮವಿಲ್ಲ: ತ್ಯಾಜ್ಯದಿಂದ ತುಂಬಿಕೊಂಡು ದುರ್ನಾತ
ಕುಂಬ್ಡಾಜೆ: ವರ್ಷಗಳ ಹಿಂದೆ ಧಾರಾಳ ನೀರು ಲಭಿಸುತ್ತಿದ್ದ ಸಾರ್ವಜನಿಕ ಬಾವಿಯೊಂದು ಈಗ ಉಪಯೋಗಶೂನ್ಯವಾಗಿ ಉಳಿದು ಕೊಂಡಿದ್ದು, ಅದೀಗ ತ್ಯಾಜ್ಯಗಳನ್ನು ಎಸೆಯುವ ಕೇಂದ್ರವಾಗಿ ಮಾರ್ಪಾಡುಗೊಂಡಿದೆ.
ಕುಂಬ್ಡಾಜೆ ಪಂಚಾಯತ್‌ನ ೧ನೇ ವಾರ್ಡ್ ಪೊಡಿಪ್ಪಳ್ಳ ದಿಡುಪ್ಪೆ ಎಂಬಲ್ಲಿ ಈ ಬಾವಿಯಿದೆ. ಪೊಡಿಪ್ಪಳ್ಳದಿಂದ ಬೆಳಿಂಜಕ್ಕೆ ತೆರಳುವ ರಸ್ತೆ ಬದಿಯಲ್ಲೇ ಈ ಬಾವಿಯಿದೆ. ಆವರಣಗೋಡೆ ಯಿಲ್ಲದೆ ಬಾಯ್ದೆರೆದುಕೊಂಡಿರುವ ಈ ಬಾವಿ ಅಪಾಯ ಭೀತಿಯೊಡ್ಡುತ್ತಿz ಯೆಂದು ನಾಗರಿಕರು ತಿಳಿಸುತ್ತಿದ್ದಾರೆ. ಎಂಟು ಕೋಲು ಆಳದ ಈ ಬಾವಿಗೆ ನಿನ್ನೆ ನಾಯಿಯೊಂದು ಬಿದ್ದಿತ್ತು. ಬಾವಿಯೊಳಗೆ ನಾಯಿ ಬೊಗಳು ವುದು ಕೇಳಿಬಂದು ಸ್ಥಳೀಯರು ಅಲ್ಲಿಗೆ ತಲುಪಿ ನೋಡಿದಾಗಲೇ ಅದು ಅಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ.
ಕೂಡಲೇ ಬಿಜೆಪಿ ನೇತಾರರಾದ ರವೀಂದ್ರ ರೈ ಗೋಸಾಡ, ಶಶಿಧರ ತೆಕ್ಕೆಮೂಲೆ, ಜಯಪ್ರಕಾಶ್ ಮುಂಡ್ರ ಕೊಳಂಜಿ, ಗೋಪಾಲಕೃಷ್ಣ, ಪ್ರವೀಣ್ ಮುಂಡ್ರಕೊಳಂಜಿ, ವೆಂಕಟ್ರಮಣ ಭಟ್ ದಿಡುಪ್ಪೆ ಮೊದಲಾದವರು ಸೇರಿ ನಾಯಿಯನ್ನು ಮೇಲಕ್ಕೆತ್ತಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಮೇಲ್ಪರಂಬದಿಂದ ಬಾವಿಗೆ ಇಳಿಯುವವರನ್ನು ಕರೆಸಿ ನಾಯಿಯನ್ನು ಮೇಲಕ್ಕೆತ್ತಲಾಯಿತು. ವಿಷಯ ತಿಳಿದು ಪಂಚಾಯತ್ ಅಧ್ಯಕ್ಷ ಹಮೀದ್ ಪೊಸೊಳಿಗೆ, ಮೃಗಾಸ್ಪತ್ರೆ ವೈದ್ಯರು ಕೂಡಾ ಸ್ಥಳಕ್ಕೆ ತಲುಪಿದರು.
ವರ್ಷಗಳ ಹಿಂದೆ ಈ ಬಾವಿಯಲ್ಲಿ ಧಾರಾಳ ನೀರು ಸಿಗುತ್ತಿತ್ತೆನ್ನಲಾಗಿದೆ. ಅನಂತರ ಅದರ ಆವರಣಗೋಡೆ ಕುಸಿದುಬಿತ್ತು. ಅದನ್ನು ದುರಸ್ತಿಗೊಳಿಸಲು ಪಂಚಾಯತ್ ಕ್ರಮ ಕೈಗೊಳ್ಳಲಿಲ್ಲ. ಆವರಣವಿಲ್ಲದ ಬಾವಿಯಿಂದ ನೀರು ಮೇಲೆತ್ತಲಾಗದುದರಿಂದ ಜನರು ಅದನ್ನು ಬಳಸುವುದನ್ನು ನಿಲ್ಲಿಸಿದರು. ಅನಂತರ ಬಾವಿಯಲ್ಲಿ ಕೆಲವು ಮಂದಿ ತ್ಯಾಜ್ಯ ಎಸೆಯಲು ತೊಡಗಿದರು. ಇದೀಗ ಅದರಲ್ಲಿ ವಿವಿಧ ರೀತಿಯ ತ್ಯಾಜ್ಯಗಳು ತುಂಬಿಕೊಂಡು ದುರ್ನಾತ ಬೀರತೊಡಗಿದೆ.
ಪಂಚಾಯತ್ ಆಸಕ್ತಿ ವಹಿಸಿದರೆ ಈ ಬಾವಿಯನ್ನು ದುರಸ್ತಿಗೊಳಿಸ ಬಹುದಾಗಿದೆ. ದುರಸ್ತಿಗೊಳಿಸಿದರೆ ಅದರ ಪ್ರಯೋಜನ ಸಾರ್ವಜನಿಕರಿಗೆ ಲಭಿಸ ಬಹುದಾಗಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಅತ್ತ ಕಣ್ಣು ಹಾಯಿಸುತ್ತಿಲ್ಲವೆಂದು ದೂರು ಕೇಳಿಬರುತ್ತಿದೆ.
ಭಾರೀ ಮೊತ್ತ ವ್ಯಯಿಸಿ ನಿರ್ಮಿ ಸಿದ ಬಾವಿಯೊಂದು ಉಪಯೋಗ ಶೂನ್ಯವಾಗಕೂಡದು. ಅದನ್ನು ದುರಸ್ತಿಗೊಳಿಸಿ ಅದರ ಸದುಪಯೋಗ ಪಡೆಯಲು ಬೇಕಾದ ಕ್ರಮಗಳನ್ನು ಏರ್ಪಡಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.