ಆವರಣಗೋಡೆ ಮನೆಗೆ ಕುಸಿದು ಬಿದ್ದು ಮಲಗಿದ್ದ ಒಂದೇ ಕುಟುಂಬದ ನಾಲ್ವರು ದಾರುಣ ಮೃತ್ಯು
ತಲಪಾಡಿ: ಉಳ್ಳಾಲದಲ್ಲಿ ಆವರಣಗೋಡೆ ಕುಸಿದು ಬಿದ್ದು ಮನೆಯೊಳಗಿದ್ದ ನಾಲ್ಕು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಉಳ್ಳಾಲ ಮುಡೂರು ಕುತ್ತಾರುಮದನಿ ನಗರದಲ್ಲಿ ಇಂದು ಮುಂಜಾನೆ ಘಟನೆ ನಡೆದಿದೆ. ಮನೆಯೊಳಗೆ ನಿದ್ರಿಸುತ್ತಿದ್ದ ಯಾಸಿರ್ (45), ಅವರ ಪತ್ನಿ ಮರಿಯಮ್ಮ (40), ಮಕ್ಕಳಾದ ರಿಹಾನ (11), ರಿಫಾನ(17) ಎಂಬವರು ಮೃತಪಟ್ಟವರು. ನೆರೆಮನೆಯ ಆವರಣಗೋಡೆ ಯಾಸಿರ್‌ರ ಮನೆಯ ಗೋಡೆಗೆ ಬಿದ್ದು ಗೋಡೆ ಸಹಿತ ಮನೆ ಕುಸಿದು ಮಲಗಿದ್ದ ನಾಲ್ಕು ಮಂದಿ ಮಣ್ಣಿನಡಿಯಲ್ಲಿ ಸಿಲುಕಿದ್ದರು. ಇವರಲ್ಲಿ ಮೂವರ ಮೃತದೇಹವನ್ನು ಹೊರತೆಗೆಯಲಾಗಿದ್ದು, ಓರ್ವ ಬಾಲಕಿಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಯಾಸಿರ್ ಮಂಗಳೂರಿನ ಬಂದರಿನಲ್ಲಿ ಕೆಲಸಗಾರರಾಗಿದ್ದಾರೆ. ರಾತ್ರಿ ಊಟಮಾಡಿ ಕುಟುಂಬ ಮಲಗಿತ್ತು. ರಾತ್ರಿ ಪೂರ್ತಿ ಮಳೆ ಬಂದ ಹಿನ್ನೆಲೆಯಲ್ಲಿ ಆವರಣಗೋಡೆ ಕುಸಿದು ಬಿದ್ದಿದೆ. ರಿಹಾನ ಹಾಗೂ ರಿಫಾನ ನಗರದ ಖಾಸಗಿ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ. ಆರು ವರ್ಷದ ಹಿಂದೆ ಖರೀದಿಸಿದ್ದ ಈ ಮನೆಯಲ್ಲಿ ಆರು ತಿಂಗಳ ಹಿಂದೆಯಷ್ಟೇ ವಾಸ ಆರಂಭಿಸಿದ್ದರು. ಅದುವರೆಗೆ ಬೇರೆಯವರಿಗೆ ಬಾಡಿಗೆ ನೀಡಿದ್ದರು. ಎರಡು ವರ್ಷಗಳ ಹಿಂದೆಯೂ ಇವರ ಮನೆ ಮೇಲೆ ಆವರಣಗೋಡೆ ಕುಸಿದು ಬಿದ್ದಿದ್ದರೂ ಅಂದು ಯಾವುದೇ ಅಪಾಯ ಉಂಟಾಗಿರಲಿಲ್ಲ. ಅಗ್ನಿ ಶಾಮಕ ದಳ ಹಾಗೂ ಸ್ಥಳೀಯರ ಕಾರ್ಯಾಚರಣೆಯಲ್ಲಿ ಮೃತ ದೇಹವನ್ನು ಹೊರ ತೆಗೆಯಲಾಗಿದೆ. ಇನ್ನೋರ್ವೆ ಪುತ್ರಿಯನ್ನು ವಿವಾಹ ಮಾಡಿಕೊಡಲಾಗಿದ್ದು, ಬಕ್ರೀದ್ ಹಬ್ಬಕ್ಕೆಂದು ತವರುಮನೆಗೆ ತಲುಪಿದ್ದ ಇವರು ನಿನ್ನೆಯಷ್ಟೇ ಗಂಡನ ಮನೆಗೆ ವಾಪಸಾಗಿದ್ದರು.