ಇಲಿ ಜ್ವರ: ಜಾಗ್ರತೆ ಪಾಲಿಸಲು ಜಿಲ್ಲಾ ವೈದ್ಯಾಧಿಕಾರಿ ಕರೆ
ಕಾಸರಗೋಡು: ಜಿಲ್ಲೆ ಕೆಲವು ಪ್ರದೇಶಗಳಲ್ಲಿ ಇಲಿ ಜ್ವರ ವರದಿಯಾದ ಹಿನ್ನೆಲೆಯಲ್ಲಿ ಜಾಗ್ರತೆ ಪಾಲಿಸಬೇಕೆಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ. ರಾಮ್‌ದಾಸ್ ಕರೆ ನೀಡಿದ್ದಾರೆ. ಬ್ಯಾಕ್ಟೀರಿಯಾದಿಂದ ಉಂಟಾಗುವ ರಕ್ತ ಅಣುಬಾಧೆಯಾಗಿದೆ ಇಲಿ ಜ್ವರ. ಇದು ಮನುಷ್ಯರನ್ನು, ನಾಯಿಗಳಿಗೆ, ಇತರ ಸಾಕು ಪ್ರಾಣಿಗಳಿಗೂ ತಗಲು ಸಾಧ್ಯತೆಯಿದೆ. ತಲೆನೋವು, ಕಾಲುಗಳ ಸಂಧುಗಳಲ್ಲಿ ನೋವು, ಕಣ್ಣಿಗೆ ಹಳದಿ, ಕೆಂಪು ವರ್ಣ, ಮೂತ್ರದಲ್ಲಿ ಕಡು ಬಣ್ಣ ಎಂಬಿವು ಈ ಜ್ವರದ ಪ್ರಧಾನ ಲಕ್ಷಣ. ಜ್ವರದೊಂದಿಗೆ ಹಳದಿ ಕಾಮಾಲೆ ಲಕ್ಷಣ ಕೂಡ ಕಂಡುಬಂದರೆ ಇಲಿ ಜ್ವರ ಎಂದು ಸಂಶಯಿಸಬಹುದು. ಇಲಿ ಜ್ವರವನ್ನು ಬಾರದಂತೆ ತಡೆಯಲು ಕಟ್ಟಿ ನಿಲ್ಲುವು ನೀರಿನಲ್ಲಿ ಇಳಿದು ಸ್ನಾನಮಾಡುವುದು, ಕೈ, ಕಾಲುಗಳನ್ನು ತೊಳೆಯುವುದು ಮಾಡಬಾರದು. ಕಟ್ಟಿ ನಿಂತಿರುವ ನೀರಿನಲ್ಲಿ, ಚರಂಡಿಗಳಲ್ಲಿ ಇಳಿದು ಕೆಲಸ ಮಾಡುವವರು. ಮೃಗವನ್ನು ಪರಿಪಾಲಿಸುವರು, ಕಟ್ಟಡ ನಿರ್ಮಾಣ ಕಾಮಿಕರು, ಹೈವೇ ನಿರ್ಮಾಣಕ್ಕೆ ಸಂಬಂಧಿಸಿ ಕೆಲಸ ಮಾಡುವರು, ಉದ್ಯೋಗ ಖಾತರಿ ಕಾರ್ಮಿಕರು, ಶುಚೀಕರಣ ಕಾರ್ಮಿಕರು ಮೊದಲಾದವರಿಗೆ ಈ ರೋಗ ತಗಲಲು ಸಾಧ್ಯತೆಯಿದ್ದು, ಕಡ್ಡಾಯವಾಗಿ ವೈದ್ಯರ ನಿರ್ದೇಶ ಪ್ರಕಾರ ಪ್ರತಿರೋಧ ಔಷಧಿಯನ್ನು ಸೇವಿಸಬೇಕು. ಇದಕ್ಕಿರುವ ಡೋಕ್ಸಿಸೈಕ್ಲಿನ್ ಔಷಧ ಸರಕಾರಿ ಆರೋಗ್ಯ ಕೇಂದ್ರಗಳಿಂದಲೂ ಉಚಿತವಾಗಿ ಲಭಿಸುವುದು.
ಆಹಾರ ಪದಾರ್ಥಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಉಪೇಕ್ಷಿಸಬಾರದು, ಹಣ್ಣು ಹಂಪಲುಗಳನ್ನು ಶುದ್ಧ ನೀರಿನಲ್ಲಿ ತೊಳೆದು ಸೇವಿಸಬೇಕು, ಅವಲಕ್ಕಿ ಮೊದಲಾದ ಆಹಾರ ಪದಾರ್ಥಗಳನ್ನು ಶುಚಿತ್ವದಿಂದ ತಯಾರಿಸಿರುವುದನ್ನು ಮಾತ್ರವೇ ಉಪಯೋಗಿಸಬೇಕು. ಶೀತಲ ಪಾನೀಯಗಳು, ಪ್ಯಾಕೆಟ್‌ಗಳು, ಕುಡಿಯುವ ನೀರು ಬಾಟ್ಲಿಗಳು, ಇತರ ಆಹಾರ ಪ್ಯಾಕೆಟ್‌ಗಳನ್ನು ಇಲಿ ಸಂಪರ್ಕಿಸದ ರೀತಿಯಲ್ಲಿ ತೆಗೆದಿಟ್ಟು ಮಾರಾಟ ಮಾಡಲು ವ್ಯಾಪಾರಿಗಳು ಗಮನಹರಿಸಬೇಕು. ರೋಗ ಸಾಧ್ಯತೆ ಹೆಚ್ಚಿರುವ ಸ್ಥಳಗಳಲ್ಲಿ ಕೆಲಸ ಮಾಡುವರು ಜ್ವರ ಗಮನಕ್ಕೆ ಬಂದರೆ ಶೀಘ್ರವೇ ಸಮೀಪದ ಚಿಕಿತ್ಸಾ ಕೇಂದ್ರಕ್ಕೆ ತಲುಪಿ ಚಿಕಿತ್ಸೆ ಪಡೆಯಲು ಡಿಎಂಒ ತಿಳಿಸಿದ್ದಾರೆ.