ಇಲೆಕ್ಟ್ರೋನಿಕ್, ಮೊಬೈಲ್ ಫೋನ್ ಅಂಗಡಿಗಳಲ್ಲಿ ಲೀಗಲ್ ಮೆಟ್ರೋಲಜಿ ಅಧಿಕಾರಿಗಳಿಂದ ತಪಾಸಣೆ: ವಂಚನೆ ಪತ್ತೆ
ಕಾಸರಗೋಡು: ಜಿಲ್ಲೆಯಲ್ಲಿ ಇಲೆಕ್ಟ್ರಾನಿಕ್ ಹೋಂ ಅಪ್ಲಾಯನ್ಸ್ ಶೋರೂಂ, ಮೊಬೈಲ್ ಫೋನ್ ಹಾಗೂ ಅದಕ್ಕೆ ಸಂಬಂಧಪಟ್ಟ ಸಾಮಗ್ರಿಗಳನ್ನು ಮಾರಾಟ ನಡೆಸುವ ಅಂಗಡಿಗಳಲ್ಲಿ ವ್ಯಾಪಕ ವಂಚನೆ ನಡೆಯುತ್ತಿದೆಯೆಂಬ ಆರೋಪದ ಹಿನ್ನೆಲೆಯಲ್ಲಿ ಲೀಗಲ್ ಮೆಟ್ರೋಲಜಿ ಇಲಾಖೆ ಅಧಿಕಾರಿಗಳು ಅಂಗಡಿಗಳಿಗೆ ದಾಳಿ ನಡೆಸಿದ್ದಾರೆ. ಮೊಬೈಲ್ ಚಾರ್ಜರ್ ಡಾಟಾ ಕೇಬಲ್‌ಗಳ ಉದ್ದ ದಾಖಲಿಸದ ಹಿನ್ನೆಲೆಯಲ್ಲಿ ಮೂರು ಕಂಪೆನಿಗಳ ಪ್ಯಾಕೆಟ್‌ಗಳನ್ನು ವಶಪಡಿಸಿ ಕೇಸು ದಾಖಲಿಸಲಾಗಿದೆ. ಸೆಪ್ಟಂಬರ್ ತಿಂಗಳಲ್ಲಿ ಅಂಗಡಿಗಳಲ್ಲಿ ಮಾರಾಟ ನಡೆಸುವ ವಯರ್‌ಲೆಸ್ ಇಯರ್ ಫೋನ್ ಪ್ಯಾಕೆಟ್‌ಗಳಲ್ಲಿ ತಯಾರಿ ದಿನಾಂಕ ಅಕ್ಟೋಬರ್ 2024, ನವಂಬರ್ 2024 ಎಂದು ದಾಖಲಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅಂತಹವುಗಳನ್ನು ವಶಪಡಿಸಲಾಯಿತು. ಎಂ.ಆರ್.ಪಿ 299 ರೂಪಾಯಿಗಳಿದ್ದ ಪ್ಯಾಕೆಟ್‌ಗಳಲ್ಲಿ ಸ್ಟಿಕ್ಕರ್ ಬಳಸಿ 499 ರೂಪಾಯಿಗಳೆಂದು ದಾಖಲಿಸಿದ ಇಯರ್ ಫೋನ್ ಪ್ಯಾಕೆಟ್‌ಗಳನ್ನು ವಶಪಡಿಸಲಾಗಿದೆ. ಇದೇ ರೀತಿಯ ವಂಚನೆ ವ್ಯಾಪಕ ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಳಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೀಗಲ್ ಮೆಟ್ರೋಲಜಿ ಇಲಾಖೆಯ ಡೆಪ್ಯುಟಿ ಕಂಟ್ರೋಲರ್ ಪಿ. ಶ್ರೀನಿವಾಸ್‌ರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಸಿಸ್ಟೆಂಟ್ ಕಂಟ್ರೋಲರ್ ಎಂ. ರತೀಶ್, ಇನ್‌ಸ್ಪೆಕ್ಟರ್‌ಗಳಾದ ಕೆ. ಶಶಿಕಲಾ, ಕೆ.ಎಸ್. ರಮ್ಯ, ಎಸ್. ವಿದ್ಯಾಧರನ್ ಭಾಗವಹಿಸಿದರು.