ಇಲೆಕ್ಷನ್ ಹೀಯರಿಂಗ್ ವೇಳೆ ಡೆಪ್ಯುಟಿ ತಹಶೀಲ್ದಾರ್‌ರ ಮೇಲೆ ಕೈಮಾಡಿದ ಪ್ರಕರಣ: ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಸೇರಿದಂತೆ ನಾಲ್ವರಿಗೆ ಸಜೆ, ಜುಲ್ಮಾನೆ
ಕಾಸರಗೋಡು: ಮತದಾರ ಯಾದಿಯಲ್ಲಿ ಹೆಸರು ಸೇರ್ಪಡೆಗೊಳಿಸುವ ಕರ್ತವ್ಯದಲ್ಲಿ ನಿರತರಾಗಿದ್ದ ಡೆಪ್ಯುಟಿ ತಹಶೀಲ್ದಾರ್ ಮೇಲೆ ಕೈಮಾಡಿ ಅವರ ಕರ್ತವ್ಯ ನಿರ್ವಹಣೆಗೆ ಚ್ಯುತಿ ಉಂಟುಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಸೇರಿದಂತೆ ನಾಲ್ವರಿಗೆ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (೨) ವಿವಿಧ ಸೆಕ್ಷನ್‌ಗಳಲ್ಲಾಗಿ ತಲಾ ಒಟ್ಟು ಒಂದು ವರ್ಷ ಮೂರು ತಿಂಗಳ ಸಜೆ ಮತ್ತು ೧೦,೦೦೦ ರೂ.ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.
ಎ.ಕೆ.ಎಂ ಅಶ್ರಫ್‌ರ ಹೊರತಾಗಿ ಅಂದು ಮಂಜೇಶ್ವರ ಪಂಚಾಯತ್ ಸದಸ್ಯರಾಗಿದ್ದ ಬಂಗ್ರಮಂಜೇಶ್ವರದ ಅಬ್ದುಲ್ಲ ಕಜೆ (೫೮), ಬಡಾಜೆಯ ಬಶೀರ್ ಕನಿಲ (೫೨) ಮತ್ತು ಬಂಗ್ರಮಂಜೇಶ್ವರ ನಡುತ್ತ್ತಲ ಹೌಸ್‌ನ ಕಾಯಿಞ್ಞಿ (ಅಬ್ದುಲ್ ಖಾದರ್ ೬೨) ಎಂಬವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಿದರೆ ಸಾಕೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಮತದಾರರ ಯಾದಿಯಲ್ಲಿ ಹೆಸರು ಸೇರ್ಪಡೆಗೊಳಿಸುವ ಚುನಾವಣಾ ಹಿಯರಿಂಗ್ ೨೦೧೦ ನವಂಬರ್ ೨೫ರಂದು ಮಂಜೇಶ್ವರ ಬ್ಲೋಕ್ ಪಂಚಾಯತ್ ಕಚೇರಿಯಲ್ಲಿ ಅಂದು ಕಾಸರಗೋಡು ಡೆಪ್ಯುಟಿ ತಹಶೀಲ್ದಾರ್ ಆಗಿದ್ದ ಎ. ದಾಮೋದರನ್ ನೇತೃತ್ವದಲ್ಲಿ ನಡೆದಿತ್ತು. ಮೂಲತಃ ಮೈಸೂರು ನಿವಾಸಿ ಬಳಿಕ ಬಂಗ್ರಮಂಜೇಶ್ವರದಲ್ಲಿ ವಾಸಿಸತೊಡಗಿದ್ದ ಮುನಾವರ್ ಇಸ್ಮಾಯಿಲ್ ಎಂಬವರು ಆಗ ಮತದಾರ ಯಾದಿಯಲ್ಲಿ ತಮ್ಮ ಹೆಸರು ಸೇರ್ಪಡೆಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಮೈಸೂರಿನಲ್ಲಿರುವ ಮತದಾರ ಯಾದಿಯಿಂದ ನಿಮ್ಮ ಹೆಸರನ್ನು ಹೊರತುಪಡಿಸಿದ ದಾಖಲು ಪತ್ರವನ್ನು ಹಾಜರುಪಡಿಸಿದ ಬಳಿಕ ಮತದಾರ ಯಾದಿಯಲ್ಲಿ ಹೆಸರು ಸೇರ್ಪಡೆಗೊಳಿಸುವ ಕ್ರಮ ಕೈಗೊಳ್ಳಬಹುದೆಂದು ಅವರಲ್ಲಿ ತಿಳಿಸಿ ಅವರ ಅರ್ಜಿಯನ್ನು ಡೆಪ್ಯುಟಿ ತಹಶೀಲ್ದಾರ್‌ರು ಬದಿಗಿರಿಸಿದ್ದರು. ಅದನ್ನು ಅಂದು ಜಿಲ್ಲಾ ಪಂಚಾ ಯತ್ ಸದಸ್ಯರಾಗಿದ್ದ ಎ.ಕೆ.ಎಂ. ಅಶ್ರಫ್ ಮತ್ತು ಇತರ ಮೂವರು ಸೇರಿ ಪ್ರಶ್ನಿಸಿ ಅದರ ಹೆಸರಲ್ಲಿ ಡೆಪ್ಯುಟಿ ತಹಶೀಲ್ದಾರ್‌ರ ಮೇಲೆ ಕೈಮಾಡಿ ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಯುಂಟುಮಾಡಿದ ದೂರಿನಂತೆ ಈ ನಾಲ್ವರ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದರು. ಆ ಪ್ರಕರಣದಲ್ಲಿ ಆರೋಪಿ ಗಳಿಗೆ ಈ ಶಿಕ್ಷ ವಿಧಿಸಲಾಗಿದೆ.
ಮಂಜೇಶ್ವರ ಶಾಸಕ ರಾಜೀನಾಮೆ ನೀಡಬೇಕು-ಬಿಜೆಪಿ
ಮಂಜೇಶ್ವರ: ಜನಪ್ರತಿನಿಧಿಯಾಗಿ ಜನರ ಸೇವೆ ಮಾಡಬೇಕಾದ ಶಾಸಕ ಎಕೆಎಂ ಅಶ್ರಫ್ ಸರಕಾರಿ ಉದ್ಯೋಗಸ್ಥರಿಗೆ ನಕಲಿ ಮತದಾನ ಚೀಟಿ ಮಾಡಿಕೊಡಲು ಒತ್ತಾಯಿಸಿ ಹಲ್ಲೆ ನಡೆಸಿರುವುದು ಖಂಡನೀಯ ಘಟನೆಯಾಗಿದೆಯೆಂದು ಬಿಜೆಪಿ ಮಂಜೇಶ್ವರ ಮಂಡಲ ಅಧಕ್ಷ ಆದರ್ಶ್ ಬಿ.ಎಂ. ತಿಳಿಸಿದ್ದಾರೆ. ನ್ಯಾಯಾಲಯದ ತೀರ್ಪಿಗೆ ತಲೆಬಾಗಿ ಶಾಸಕರು ರಾಜಕೀಯ ನೈತಿಕತೆ ತೋರಿ ರಾಜೀನಾಮೆ ನೀಡಬೇಕು. ಶಿಕ್ಷೆಗೆ ಒಳಗಾದ ಶಾಸಕರು ಮಂಜೇಶ್ವರಕ್ಕೆ ಅವಮಾನ ಎಂದು ಆದರ್ಶ್ ಬಿ.ಎಂ. ತಿಳಿಸಿದ್ದಾರೆ.