ಉದ್ಯೋಗ ಭರವಸೆ ನೀಡಿ 28 ಲಕ್ಷ ರೂ. ಪಡೆದು ವಂಚನೆ: ಮುಂಬೈಯ ನಾಲ್ವರ ವಿರುದ್ಧ ಕೇಸು ದಾಖಲು
ಕಾಸರಗೋಡು: ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಯುವಕನೋರ್ವನಿಂದ 28 ಲಕ್ಷ ರೂ. ಪಡೆದು ಬಳಿಕ ವಂಚಿಸಿದ ದೂರಿನಂತೆ ನಾಲ್ವರ ವಿರುದ್ಧ ಚೀಮೇನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಯ್ಯೂರು ಕ್ಲಾಯಿಕೋಡು ನಿವಾಸಿ ಎಸ್.ವಿ. ವಸಂತರಾಜ್ ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಮುಂಬೈಯ ಕಂಪೆನಿಯೊಂದರಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಆ ಸಂಸ್ಥೆಯವರು ಎಂದು ಹೇಳಲಾಗುತ್ತಿರುವ ನಾಲ್ವರುಸೇರಿ ಜೂನ್ 15ರಿಂದ 24ರ ಅವಧಿಯಲ್ಲಿ ಗೂಗಲ್ ಪೇ ಹಾಗೂ ಬ್ಯಾಂಕ್ ಖಾತೆ ಮೂಲಕ ತನ್ನಿಂದ 28,38,713 ರೂ. ಪಡೆದು ನಂತರ ಕೆಲಸ ನೀಡದೆ ವಂಚಿಸಿರುವುದಾಗಿ ದೂರಿನಲ್ಲಿ ವಸಂತರಾಜ್ ಆರೋಪಿಸಿದ್ದಾರೆ.
ಇದರಂತೆ ಮುಂಬೈಯ ಸುಶಾಂತ್ ಮಾಲಿಕ್, ಸ್ನೇಹಾ, ಕೃತಿಕಾ ಯಾದವ್ ಮತ್ತು ದೇವ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.