ಉಪ್ಪಳದಲ್ಲಿ ಎಟಿಎಂಗೆ ಹಣ ತಂದ ವಾಹನದಿಂದ 50 ಲಕ್ಷ ರೂ. ಕಳವು: ಬಂಧಿತ ಆರೋಪಿಗೆ ರಿಮಾಂಡ್
ಉಪ್ಪಳ: ಉಪ್ಪಳದಲ್ಲಿರುವ ಖಾಸಗಿ ಬ್ಯಾಂಕ್‌ನ ಎಟಿಎಂನಲ್ಲಿ ತುಂಬಿಸಲಿ ರುವ ಹಣದೊಂದಿಗೆ ತಲುಪಿದ ವಾಹನದಿಂದ ೫೦ ಲಕ್ಷ ರೂಪಾಯಿ ಕಳವು ನಡೆಸಿದ ಪ್ರಕರಣದಲ್ಲಿ ಸೆರೆಗೀಡಾದ ಇನ್ನೋರ್ವ ಆರೋಪಿ ಯನ್ನು ಮಂಜೇಶ್ವರ ಪೊಲೀಸರು ನಿನ್ನೆ ಕಾಸರಗೋಡು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ಈ ವೇಳೆ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.
ತಮಿಳುನಾಡಿನ ತ್ರಿಚ್ಚಿ ರಾಂಜಿನಗರ ಹರಿಭಾಸ್ಕರ್ ಕಾಲನಿ ತಿರುಟ್ಟ್ ಗ್ರಾಮದ ಕಾರ್ವರ್ಣನ್ (28) ಎಂಬಾತನನ್ನು ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್, ಮಂಜೇಶ್ವರ ಇನ್ಸ್‌ಪೆಕ್ಟರ್ ಇ. ಅನೂಬ್ ಕುಮಾರ್ ಎಂಬಿವರ ನೇತೃತ್ವದ ತಂಡ ತಮಿಳುನಾಡಿನಿಂದ ಬಂಧಿಸಿದೆ. ಕಳವು ತಂಡದ ಸೂತ್ರಧಾರನಾದ ಕಾರ್ವರ್ಣನ್ ಹಾಗೂ ಇನ್ನೋರ್ವ ಆರೋಪಿ ತಮಿಳುನಾಡಿನ ಸ್ವಂತ ಊರಾದ ತಿರುಟ್ಟ್ ಗ್ರಾಮಕ್ಕೆ ತಲುಪಿದ ಬಗ್ಗೆ ಲಭಿಸಿದ ಮಾಹಿತಿಯಂತೆ ಪೊಲೀಸರು ತಮಿಳುನಾಡಿಗೆ ತೆರಳಿ ಮಾರು ವೇಷದಲ್ಲಿ ವಾಸಿಸಿ ಆರೋಪಿಗಳ ಮೇಲೆ ನಿಗಾ ಇರಿಸಿದ್ದರು. ಮೊನ್ನೆ ಕಾರ್ವರ್ಣನ್ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ಪೊಲೀಸರನ್ನು ಕಂಡೊಡನೆ ಆತ ಓಡಿ ಪಾರಾಗಲು ಯತ್ನಿಸಿದ್ದು ಈ ವೇಳೆ ಅತೀ ಸಾಹಸದಿಂದ ಪೊಲೀಸರು ಆತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳವು ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆರೋಪಿಗಳನ್ನು ಸೆರೆ ಹಿಡಿಯಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾರ ನಿರ್ದೇಶದ ಮೇರೆಗೆ ಇತ್ತೀಚೆಗೆ ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್‌ರ ನೇತೃತ್ವದಲ್ಲಿ ಪ್ರತ್ಯೇಕ ತಂಡವನ್ನು ರೂಪೀಕರಿಸ ಲಾಗಿತ್ತು. ಡಿವೈಎಸ್ಪಿ ಹಾಗೂ ಮಂಜೇಶ್ವರ ಇನ್ಸ್‌ಪೆಕ್ಟರ್, ಜೊತೆಗೆ ಮಂಜೇಶ್ವರ ಎಸ್.ಐ.ಗಳಾದ ರತೀಶ್‌ಗೋಪಿ, ದಿನೇಶ್ ರಾಜನ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಅಬ್ದುಲ್ ಶುಕೂರ್, ಸಿವಿಲ್ ಪೊಲೀಸ್ ಆಫೀಸರ್ ಪಿ.ಕೆ. ಗಿರೀಶ್ ಎಂಬಿವರನ್ನೊಳಗೊಂಡ ತಂಡ ತಮಿಳುನಾಡಿನಲ್ಲಿ ಕಳವು ಆರೋಪಿಗಳ ಪತ್ತೆಗೆ ಬಲೆ ಬೀಸಿತ್ತು. 2024 ಮಾರ್ಚ್ 27ರಂದು ಉಪ್ಪಳದಲ್ಲಿ ಕಳವು ನಡೆದಿತ್ತು. ಎಟಿಎಂನಲ್ಲಿ ಹಣ ತುಂಬಿಸಲು ತಲುಪಿದ ವಾಹನದಿಂದ ಹಾಡಹಗಲೇ ತಂಡ ೫೦ ಲಕ್ಷ ರೂಪಾಯಿಗಳನ್ನು ಕಳವು ನಡೆಸಿತ್ತು. ಈ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆಗೆ ಚಾಲನೆ ನೀಡಿದ ಮಂಜೇಶ್ವರ ಪೊಲೀಸರು ಘಟನೆ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಕಳ್ಳರ ಕುರಿತು ಸೂಚನೆ ಲಭಿಸಿತ್ತು.
ಇದೇ ಕಳವು ಪ್ರಕರಣದಲ್ಲಿ ಭಾಗಿಯಾದ ತಮಿಳುನಾಡು ನಿವಾಸಿಯಾದ ಮುತ್ತುಕುಮಾರನ್ (47) ಎಂಬಾತನನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ಈತನನ್ನು ತನಿಖೆಗೊಳಪಡಿಸಿದಾಗ ಇತರ ಆರೋಪಿಗಳ ಪೂರ್ಣ ಮಾಹಿತಿ ಲಭಿಸಿದೆ. ಇದೇ ಕಳವು ಪ್ರಕರಣದಲ್ಲಿ ಇನ್ನೋರ್ವ ಆರೋಪಿ ಸೆರೆಗೀಡಾಗಲು ಬಾಕಿಯಿದ್ದಾನೆ. ಆತನಿಗಾಗಿ ಶೋಧ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.