ಉಪ್ಪಳದಲ್ಲಿ ಕಾವಲುಗಾರನನ್ನು ಇರಿದು ಕೊಲೆಗೈದ ಪ್ರಕರಣದ ಆರೋಪಿ ಬಂಧನ: ಅಸಭ್ಯ ನುಡಿದ ದ್ವೇಷವೇ ಕೊಲೆಗೆ ಕಾರಣ- ಆರೋಪಿ ಹೇಳಿಕೆ
ಉಪ್ಪಳ: ಉಪ್ಪಳ ಪೇಟೆಯಲ್ಲಿ ಮೀನು ಮಾರುಕಟ್ಟೆ ಸಮೀಪದಲ್ಲಿರುವ ಕಟ್ಟಡದ ಕಾವಲುಗಾರನನ್ನು ಇರಿದು ಕೊಲೆಗೈದ ಪ್ರಕರಣದ ಆರೋಪಿಯನ್ನು ಪೊಲೀಸರು ೨೪ ಗಂಟೆಯೊಳಗೆ ಸೆರೆ ಹಿಡಿದಿದ್ದಾರೆ. ಉಪ್ಪಳ ಪತ್ವಾಡಿಯ ಸವಾದ್ (24) ಎಂಬಾತನನ್ನು ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಇ. ಅನೂಬ್ ಕುಮಾರ್ ನೇತೃತ್ವದ ತಂಡ ಬಂಧಿಸಿದೆ.
ಕೊಲ್ಲಂ ಏಳುಕೋನ್ ನಿವಾಸಿಯೂ ಹದಿನೈದು ವರ್ಷಗಳಿಂದ ಪಯ್ಯನ್ನೂರಿನಲ್ಲಿ ವಾಸಿಸುತ್ತಿದ್ದ ಸುರೇಶ್ (48) ಎಂಬವರನ್ನು ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಸವಾದ್‌ನನ್ನು ಬಂಧಿಸಲಾಗಿದೆ.
ಸುರೇಶ್ ಎರಡು ವರ್ಷಗಳಿಂದ ಉಪ್ಪಳದಲ್ಲಿ ಕಟ್ಟಡವೊಂದರ ಕಾವಲುಗಾರನಾಗಿ ಕೆಲಸ ನಿರ್ವಹಿಸುತ್ತಿದ್ದರು. ಮಂಗಳವಾರ ರಾತ್ರಿ ಸವಾದ್ ಹಾಗೂ ಸುರೇಶ್ ಕಟ್ಟಡ ಸಮೀಪ ಮದ್ಯ ಸೇವಿಸಿದ್ದರು. ಈ ವೇಳೆ ಅವರೊಳಗೆ ವಾಗ್ವಾದ ನಡೆದಿತ್ತು. ತನ್ನನ್ನು ಅಸಭ್ಯವಾಗಿ ನಿಂದಿಸಿದಾಗ ದ್ವೇಷಗೊಂಡು ಕೈಯಲ್ಲಿದ್ದ ಚಾಕುವಿನಿಂದ ಇರಿದಿರುವುದಾಗಿ ಆರೋಪಿಸಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಕೊಲೆ ನಡೆದ ತಕ್ಷಣ ಸವಾದ್ ಅಲ್ಲಿಂದ ಪರಾರಿಯಾಗಿದ್ದನು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾರ ನಿರ್ದೇಶ ಪ್ರಕಾರ ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್‌ರ ಮೇಲ್ನೋಟದಲ್ಲಿ ರೂಪೀಕರಿಸಿದ ಮೂರು ಸ್ಕ್ವಾಡ್‌ಗಳನ್ನು ರೂಪೀಕರಿಸಿ ಆರೋಪಿಗಳಿಗಾಗಿ ಶೋಧ ನಡೆಸಲಾಗಿತ್ತು.
ಆರೋಪಿ ಕರ್ನಾಟಕಕ್ಕೆ ಪರಾರಿಯಾಗಿರಬಹುದೆಂಬ ಶಂಕೆ ಮೇರೆಗೆ ಎರಡು ತಂಡಗಳು ಕರ್ನಾಟಕದಲ್ಲಿ ಹಾಗೂ ಒಂದು ತಂಡ ಸವಾದ್‌ನ ಸಂಬಂಧಿಕರ ಮನೆಯನ್ನು ಕೇಂದ್ರೀಕರಿಸಿ ತನಿಖೆ ನಡೆಸಿವೆ. ಈ ಮಧ್ಯೆ ನಿನ್ನೆ ರಾತ್ರಿ ಸವಾದ್ ಮಂಜೇಶ್ವರದ ಸಂಬಂಧಿಕರ ಮನೆಗೆ ಬರುತ್ತಿದ್ದಾನೆಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಇದರಂತೆ ಇನ್ಸ್‌ಪೆಕ್ಟರ್ ಅನೂಬ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿ ಸವಾದ್‌ನನ್ನು ಬಂಧಿಸಿದ್ದಾರೆ. ಎಸ್.ಐಗಳಾದ ರತೀಶ್ ಕೆ.ಜಿ., ಉಮೇಶ್ ಕೆ.ಆರ್, ಮನುಕೃಷ್ಣನ್, ಎಎಸ್‌ಐಗಳಾದ ಅತುಲ್‌ರಾಮ್, ಮಧು, ಸಿಪಿಒಗಳಾದ ಧನೇಶ್, ಅಬ್ದುಲ್ ಸಲಾಂ, ಸಂದೀಪ್, ಪ್ರಮೋದ್, ಸಜಿತ್, ವಿಜಿನ್ ಎಂಬಿವರು ಆರೋಪಿಯನ್ನು ಸೆರೆ ಹಿಡಿದ ಪೊಲೀಸ್ ತಂಡದಲ್ಲಿದ್ದರು.