ಉಪ್ಪಳದಲ್ಲಿ ಯುವಕನ ಕೊಲೆ ಪ್ರಕರಣ: 11ವರ್ಷಗಳ ಬಳಿಕ ಆರೋಪಿ ಬಂಧನ
ಉಪ್ಪಳ: ಉಪ್ಪಳದಲ್ಲಿ ನಡೆದ ಕೊಲೆ ಪ್ರಕರಣವೊಂದರ ಆರೋಪಿಯೋರ್ವ ಹನ್ನೊಂದು ವರ್ಷಗಳ ಬಳಿಕ ಸೆರೆಗೀಡಾಗಿದ್ದಾನೆ.
ಕರ್ನಾಟಕದ ಭದ್ರಾವತಿ ದೇವನಹಳ್ಳಿ ನಿವಾಸಿ ಸಯ್ಯದ್ ಆಶಿಫ್ (34) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. 2013ರಲ್ಲಿ ಉಪ್ಪಳ ಮಣ್ಣಂಗುಳಿ ಮೈದಾನ ಬಳಿಯ ಮುತ್ತಲೀಬ್ (38) ಎಂಬವರ ಕೊಲೆ ಪ್ರಕರಣದಲ್ಲಿ ಸಯ್ಯದ್ ಆಶಿಫ್ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಅಂದು ಉಪ್ಪಳ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಈತ ಉಪ್ಪಳದಲ್ಲಿ ಆಟೋರಿಕ್ಷಾ ಚಾಲಕನಾಗಿದ್ದನು.
ಮುತ್ತಲೀಬ್ ಕೊಲೆಯ ಬಳಿಕ ಈತ ತಲೆಮರೆಸಿಕೊಂಡಿದ್ದನು. ಈತನಿಗಾಗಿ ಹನ್ನೊಂದು ವರ್ಷಗಳಿಂದ ಪೊಲೀಸರು ಶೋಧ ನಡೆಸುತ್ತಿದ್ದರು. ಇದೀಗ ಭದ್ರಾವತಿಯ ದೇವನಹಳ್ಳಿಯ ಲ್ಲಿರುವುದಾಗಿ ಲಭಿಸಿದ ಮಾಹಿತಿ ಮೇರೆಗೆ ಮಂಜೇಶ್ವರ ಸಿ.ಐ. ರಾಜೀವ್ ಕುಮಾರ್ ನೇತೃತ್ವದ ಪೊಲೀಸರು ಅಲ್ಲಿಗೆ ತೆರಳಿ ಬಂಧಿಸಿ ಮಂಜೇಶ್ವರಕ್ಕೆ ತಲುಪಿಸಿದ್ದಾರೆ. ಬಳಿಕ ಕಾಸರಗೋಡು ನ್ಯಾಯಾಲಯದಲ್ಲಿ ಆರೋಪಿಯನ್ನು ಹಾಜರುಪಡಿಸಿದ್ದು, ಈ ವೇಳೆ ರಿಮಾಂಡ್ ವಿಧಿಸಲಾಗಿದೆ.
2013 ಅಕ್ಟೋಬರ್ 24ರಂದು ರಾತ್ರಿ ಮುತ್ತಲೀಬ್ರನ್ನು ತಂಡವೊಂದು ಕಾರು ತಡೆದು ನಿಲ್ಲಿಸಿ ಇರಿದು ಕೊಲೆಗೈದಿತ್ತೆನ್ನಲಾಗಿದೆ. ಕಾಲಿಯ ರಫೀಕ್ ನೇತೃತ್ವದ ತಂಡ ಮುತ್ತಲೀಬ್ರನ್ನು ಕೊಲೆಗೈದಿರುವುದಾಗಿ ಹೇಳಲಾಗುತ್ತಿದೆ. ಮಣ್ಣಂಗುಳಿ ಸ್ಟೇಡಿಯಂ ಬಳಿಯ ಸ್ವಂತ ಕ್ವಾರ್ಟರ್ಸ್ಗೆ ಮಾರುತಿ ಕಾರಿನಲ್ಲಿ ತೆರಳುತ್ತಿದ್ದ ಮುತ್ತಲಿಬ್ರನ್ನು ರಾತ್ರಿ 10.30ಕ್ಕೆ ಆಕ್ರಮಿಸಲಾಗಿತ್ತು. ಕಾರು ಬರುತ್ತಿದ್ದಂತೆ ಅಡಗಿ ನಿಂತಿದ್ದ ತಂಡ ಮೊದಲು ಗುಂಡು ಹಾರಿಸಿದೆ. ಈ ವೇಳೆ ಅಪಾಯದಿಂದ ಪಾರಾಗಲು ಮುತ್ತಲಿಬ್ ಯತ್ನಿಸಿದಾಗ ಕಾರು ಗೋಡೆಗೆ ಢಿಕ್ಕಿ ಹೊಡೆದು ನಿಂತಿದೆ. ಅಷ್ಟರಲ್ಲಿ ತಲುಪಿದ ತಂಡ ಇರಿದು ಕೊಲೆಗೈದಿತ್ತೆನ್ನಲಾಗಿದೆ.ಕಾಲಿಯ ರಫೀಕ್ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ಸೆರೆಗೀಡಾಗಿ ಜೈಲು ವಾಸ ಅನುಭವಿಸಿದ್ದನು. ಅನಂತರ ಬಿಡುಗಡೆಗೊಂಡ ಈತ ಮುತ್ತಲೀಬ್ರನ್ನು ಕೊಲೆ ನಡೆಸಲು ತಂತ್ರ ಹೂಡಿದ್ದಾನೆಂದು ತನಿಖೆಯಲ್ಲಿ ತಿಳಿದು ಬಂದಿದೆ.