ಉಪ್ಪಳ ಅಗ್ನಿಶಾಮಕದಳ ಕಟ್ಟಡ ಸಹಿತ 3 ರಸ್ತೆಗಳ ದುರಸ್ತಿಗೆ 20 ಕೋಟಿ ರೂ. ಮಂಜೂರು
ಕಾಸರಗೋಡು: ಕೇರಳದ ವಿವಿಧ ಜಿಲ್ಲೆಗಳಲ್ಲಾಗಿ 117 ರಸ್ತೆಗಳ ಪುನರ್ ನಿರ್ಮಾಣಕ್ಕೆ 269.19 ಕೋಟಿ ರೂ. ಲೋಕೋಪಯೋಗಿ ಇಲಾಖೆಯಿಂದ ಮಂಜೂರಾತಿ ಲಭಿಸಿದೆ. ಎರಡು ಕಾಲುದಾರಿಗಳಿಗೆ 7.17 ಕೋಟಿ ರೂ., 19 ಕಟ್ಟಡಗಳಿಗೆ 39 ಕೋಟಿ ರೂ. ಮಂಜೂರು ಮಾಡಲಾಗಿದೆ. ರಸ್ತೆಗಳಿಗೆ ಬಿಎಂಬಿಸಿ ಗುಣಮಟ್ಟದಲ್ಲಿ ನವೀಕರಿಸು ವುದಕ್ಕೆ ಹಾಗೂ ದುರಸ್ತಿಗೊಳಿಸುವುದಕ್ಕೆ ಮೊತ್ತ ಮಂಜೂರು ಮಾಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮೂರು ರಸ್ತೆಗೆ ಹಾಗೂ 4 ಕಟ್ಟಡಗಳಿಗಾಗಿ 20 ಕೋಟಿ ರೂ.ಗಳ ಆಡಳಿತಾನುಮತಿ ನೀಡಲಾಗಿದೆ. ಕಾಸರಗೋಡು ಮಂಡಲದ ಚೌಕಿ- ಉಳಿಯತ್ತಡ್ಕ- ಎಸ್‌ಪಿ ನಗರ- ಹಿದಾಯತ್‌ನಗರ- ಕೋಪ- ರಸ್ತೆಗೆ ೫ ಕೋಟಿ ರೂ. ಹಾಗೂ ಕಾಞಂಗಾಡ್ ಮಂಡಲದ ಪಾನತ್ತೂರು- ಪಾರಕಡವ್ ರಸ್ತೆಗೆ 4 ಕೋಟಿ ರೂ., ಉದುಮ ಮಂಡಲದ ಎರುಮಪುಳಂ- ತಾಣಿಯಡಿ ರಸ್ತೆಗೆ ೫ ಕೋಟಿ ರೂ. ಮಂಜೂರು ಮಾಡಲಾಗಿದೆ. ಮಂಜೇಶ್ವರ ಮಂಡಲದ ಉಪ್ಪಳ ಅಗ್ನಿಶಾಮಕದಳದ ಕಟ್ಟಡ ನಿರ್ಮಾಣಕ್ಕೆ 1.5 ಕೋಟಿ ರೂ, ಕಾಞಂಗಾಡ್ ಮಂಡಲದ ಹೊಸದುರ್ಗ ರೆಸ್ಟ್ ಹೌಸ್ ಹೊಸ ಬ್ಲೋಕ್ ನಿರ್ಮಾಣಕ್ಕೆ 1.5 ಕೋಟಿ ರೂ, ತೃಕ್ಕರಿಪುರ ಮಂಡಲದ ಚೀಮೇನಿಯಲ್ಲಿ ಹೊಸ ಅಗ್ನಿಶಾಮಕದಳ ಕೇಂದ್ರಕ್ಕೆ 3 ಕೋಟಿ ರೂ. ಮಂಜೂರು ಮಾಡಲಾಗಿದೆ.