ಉಮಾ ಥೋಮಸ್ ಅಲ್ಪ ಚೇತರಿಕೆ
ಕೊಚ್ಚಿ: ಕೊಚ್ಚಿ ಕಲ್ಲೂರು ಜವಾಹರ ಲಾಲ್ ಅಂತಾರಾಷ್ಟ್ರೀಯ ಕ್ರೀಡಾಂ ಗಣದಲ್ಲಿ ನಟಿ ದಿವ್ಯಾ ಉಣ್ಣಿ ನೇತೃತ್ವದಲ್ಲಿ ವಿಶ್ವ ದಾಖಲೆ ಸೃಷ್ಟಿಸುವ ಗುರಿಯೊಂದಿಗೆ 12000 ನೃತ್ಯಗಾರರು ಭಾಗವಹಿಸಿದ ನೃತ್ಯ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಬಂದ ವೇಳೆ ಆ ಕ್ರೀಡಾಂಗಣದ ೧೫ ಅಡಿ ಎತ್ತರದ ಗ್ಯಾಲರಿಯಿಂದ ಬಿದ್ದು ಗಂಭೀರ ಗಾಯಗೊಂಡ ತೃಕ್ಕಾಕರ ಶಾಸಕಿ ಉಮಾ ಥೋಮಸ್‌ರ ಆರೋಗ್ಯ ಸ್ಥಿತಿ ಅಲ್ಪ ಸುಧಾರಿಸಿದೆಯೆಂದು ವೈದ್ಯರು ತಿಳಿಸಿದ್ದಾರೆ.
ಉಮಾ ಥೋಮಸ್‌ರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ತಜ್ಞ ವೈದ್ಯರಿಂದ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಅರ ಪುತ್ರ ಇಂದು ಬೆಳಿಗ್ಗೆ ಆಸ್ಪತ್ರೆಗೆ ಬಂದಾಗ ಉಮಾ ಥೋಮಸ್ ಕಣ್ಣು ತೆರೆದು, ಕೈಕಾಲುಗಳನ್ನು ಅಲುಗಾಡಿಸತೊಡಗಿದರು. ಇದು ಅವರ ಆರೋಗ್ಯ ಸ್ಥಿತಿಯಲ್ಲಿ ಅಲ್ಪ ಪ್ರಗತಿ ಉಂಟಾಗಿದೆಯೆಂದು ಸೂಚಿಸುತ್ತಿದೆಯೆಂದು ವೈದ್ಯರು ತಿಳಿಸಿದ್ದಾರೆ.
ಇದೇ ವೇಳೆ ಇನ್ನೊಂದೆಡೆ ಜವಾಹರ್‌ಲಾಲ್ ಕ್ರೀಡಾಂಗಣದಲ್ಲಿ ನೃತ್ಯ ಕಾರ್ಯಕ್ರಮ ಆಯೋಜಿಸಿದ ನಟಿ ದಿವ್ಯಾ ಉಣ್ಣಿಯ ಹೇಳಿಕೆ ದಾಖಲಿಸಲು ಪೊಲೀಸರು ತೊಡಗಿದ್ದಾರೆ. ಈ ನೃತ್ಯ ಕಾರ್ಯಕ್ರಮ ನಡೆಸಿದ ಸಂಘಾಟಕರ ವಿರುದ್ಧ ಕೊಚ್ಚಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅದಕ್ಕೆ ಸಂಬಂಧಿಸಿ ವೇದಿಕೆ ನಿರ್ಮಿಸಿದ ಬೆನ್ನಿ ಮೆನೇಜರ್ ಕೃಷ್ಣ ಕುಮಾರ್, ಸಿಇಒ ಶಮೀರ್ ಅಬ್ದುಲ್ಲ ಎಂಬವರನ್ನು ಪೊಲೀಸರು ಬಂಧಿಸಿ ಬಳಿಕ ಜಾಮೀನಿನಲ್ಲಿ ಬಿಡುಗಡೆ ಗೊಳಿಸಿದ್ದಾರೆ.
ಇದರ ತನಿಖೆಯ ಮುಂದಿನ ಹಂತದ ಕ್ರಮವೆಂಬಂತೆ ನಟಿ ದಿವ್ಯಾ ಉಣ್ಣಿಯ ಹೇಳಿಕೆಯನ್ನು ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.