ಎಂಡೋಸಲ್ಫಾನ್ ಅನಿರ್ಧಿಷ್ಟಾವಧಿ ಚಳವಳಿ
ಕಾಸರಗೋಡು: ವಿವಿಧ ಬೇಡಿಕೆ ಗಳನ್ನು ಮುಂದಿರಿಸಿಕೊಂಡು ಎಂಡೋಸ ಲ್ಫಾನ್ ಸಂತ್ರಸ್ತರ ಜನಪರ ಒಕ್ಕೂಟ ಅನಿರ್ದಿಷ್ಠಾವಧಿ ಚಳವಳಿ ಆರಂಭಿಸಿದೆ. ಕಾಞಂಗಾಡ್ ಮಿನಿ ಸಿವಿಲ್ ಸ್ಟೇಶನ್ ಮುಂಭಾಗದಲ್ಲಿ ಇಂದು ಬೆಳಿಗ್ಗೆ ಚಳವಳಿ ಆರಂಭಗೊಂಡಿದೆ. ಪ್ರತೀದಿನ ಬೆಳಿಗ್ಗೆ ೧೦ರಿಂದ ಸಂಜೆ ೫ ಗಂಟೆವರೆಗೆ ನಡೆಯುವ ಚಳವಳಿಯಲ್ಲಿ ಹಲವರು ಭಾಗವಹಿ ಸಲಿದ್ದಾರೆ. ೨೦೧೭ರಲ್ಲಿ ನಡೆದ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಂಡವರಲ್ಲಿ ಸಂತ್ರಸ್ತರೆಂದು ಪತ್ತೆಹಚ್ಚಿದ್ದರೂ ಬಳಿಕ ಪಟ್ಟಿಯಿಂದ ಹೊರತುಪಡಿಸಲಾದ ೧೦೩೧ ಮಂದಿ ಯನ್ನು ಸಂತ್ರಸ್ತರ ಯಾದಿಯಲ್ಲಿ ಸೇರಿಸಿ ಅವರಿಗೆ ಸೌಲಭ್ಯಗಳನ್ನು ನೀಡಬೇಕು ಎಂಬುವುದು ಚಳವಳಿನಿರತರ ಪ್ರಧಾನ ಬೇಡಿಕೆಯಾಗಿದೆ.
ಇದೇ ಬೇಡಿಕೆಯನ್ನು ಮುಂದಿರಿಸಿಕೊಂಡು ೨೦೧೯ ಜನವರಿ ೩೦ರಿಂದ ತಿರುವನಂತಪುರ ಸೆಕ್ರೆಟರಿಯೇಟ್ ಮುಂದೆ ತಾಯಂದಿರು ಅನಿರ್ದಿಷ್ಟಾವಧಿ ಉಪವಾಸ ಚಳವಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ೧೮ ವರ್ಷಕ್ಕಿಂತ ಕೆಳ ಪ್ರಾಯದ ಮಕ್ಕಳನ್ನು ಯಾವುದೇ ತಪಾಸಣೆ ನಡೆಸದ ಯಾದಿಯಲ್ಲಿ ಸೇರಿಸಲು ಹಾಗೂ ಇತರರನ್ನು ವೈದ್ಯಕೀಯ ದಾಖಲೆಗಳ ಆಧಾರದಲ್ಲಿ ಅರ್ಹತೆಯುಳ್ಳವರನ್ನು ಸೇರಿಸಲು ಮುಖ್ಯಮಂತ್ರಿಯ ಉಪಸ್ಥಿತಿಯಲ್ಲಿ ನಡೆಸಿದ ಚರ್ಚೆಯಲ್ಲಿ ನಿರ್ಧರಿಸಲಾಗಿತ್ತು. ಇದರಂತೆ ೫೧೧ ಮಕ್ಕಳನ್ನು ಎಂಡೋಸಲ್ಫಾನ್ ಯಾದಿಯಲ್ಲಿ ಒಳಪಡಿಸಿದ್ದರೂ ೧೦೩೧ ಮಂದಿಯ ವಿಷಯದಲ್ಲಿ ಯಾವುದೇ ನಿರ್ಧಾರವಾಗಿರಲಿಲ್ಲ. ಈ ವಿಷಯದಲ್ಲಿ ಶೀಘ್ರ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಿ ಇಂದಿನಿಂದ ಅನಿರ್ದಿಷ್ಠಾವಧಿ ಚಳವಳಿ ಆರಂಭಿಸಲಾಗಿದೆ.