ಎಡನೀರು ಕ್ಷೇತ್ರ ಕಳವು: ಇನ್ನೋರ್ವ ಆರೋಪಿ ಸೆರೆ, ಕಾರು ವಶ
ಕಾಸರಗೋಡು: ನ.೩ರಂದು ರಾತ್ರಿ ಎಡನೀರು ಮಠದ ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು ನಡೆದ ಪ್ರಕರಣದ ಇನ್ನೋರ್ವ ಆರೋಪಿಯನ್ನು ವಿದ್ಯಾನಗರ ಪೊಲೀಸ್ ಠಾಣೆಯ ಎಸ್.ಐ. ವಿ. ರಾಮಕೃಷ್ಣನ್ ಬಂಧಿಸಿದ್ದಾರೆ.
ಉಳ್ಳಾಲ ದರ್ಗಾ ಬಳಿಯ ತೋಟಾ ಮಂಜಿಲ್ ನಿವಾಸಿ ಫೈಸಲ್ ಅಲಿಯಾಸ್ ಮೊಹಮ್ಮದ್ ಫೈಸಲ್ (36) ಬಂಧಿತನಾದ ಆರೋಪಿ. ಕಳವು ನಡೆಸಲು ಆರೋಪಿಗಳು ಬಂದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತನ ವಿರುದ್ಧ ವಿದ್ಯಾನಗರ ಮಾತ್ರವಲ್ಲದೆ ಬದಿಯಡ್ಕ, ಮಂಜೇಶ್ವರ, ಉಳ್ಳಾಲ ಸೇರಿದಂತೆ ಹಲವು ಪೊಲೀಸ್ ಠಾಣೆಗಲ್ಲಾಗಿ ೧೮ ಕಳವು ಪ್ರಕರಣಗಳು ಇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಪ್ರಕರಣದ ಇನ್ನೋರ್ವ ಆರೋಪಿ ಕರ್ನಾಟಕ ಕಡಬ ತಾಲೂಕು ಪೊಯ್ಯೆ ಅತೂರು ಕುಳಾಯಿ ಹೌಸಿನ ಇಬ್ರಾಹಿಂ ಕಲಂದರ್ ಅಲಿಯಾಸ್ ಇಬ್ರಾಹಿಂ (೪೫)ನನ್ನು ಇತ್ತೀಚೆಗೆ ಎಸ್‌ಐ ವಿ. ರಾಮಕೃಷ್ಣನ್ ಬಂಧಿಸಿದ್ದರು. ಆತನನ್ನು ನಂತರ ಎಡನೀರು ಕ್ಷೇತ್ರಕ್ಕೆ ಕರೆತಂದು ಕಳವಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸಿ ದರು. ಎಡನೀರು ಶ್ರೀ ವಿಷ್ಣುಮಂಗಲ ಕ್ಷೇತ್ರಕ್ಕೆ ನುಗ್ಗಿ ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿದ್ದ ೭೫೦೦ರೂ. ನಗದನ್ನು ಕಳವುಗೈಯ್ಯಲಾಗಿತ್ತು. ಮಾತ್ರವಲ್ಲದೆ, ಶ್ರೀ ಕ್ಷೇತ್ರದ ಗಣಪತಿ ದೇವರ ಗರ್ಭಗುಡಿಯ ಬಾಗಿಲನ್ನು ಒಡೆಯಲಾಗಿತ್ತು. ಶ್ರೀ ವಿಷ್ಣುಮಂಗಲ ಕ್ಷೇತ್ರದ ಪಂಚಲೋಹ ಬಲಿ ಬಿಂಬವನ್ನು ಸ್ಥಾನಬದಲಾಯಿಸಿದ ಸ್ಥಿತಿಯಲ್ಲೂ ಅಂದು ಪತ್ತೆಯಾಗಿತ್ತು. ಆ ಬಗ್ಗೆ ಎಡನೀರು ಮಠದ ಅಸಿಸ್ಟೆಂಟ್ ಮೆನೇಜರ್ ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.