ಎಡನೀರು ಮಠಾಧೀಶರ ಕಾರಿಗೆ ಹಾನಿ: ಚಾಲಕನ ದೂರಿನಂತೆ ಇಬ್ಬರ ವಿರುದ್ಧ ಕೇಸು ದಾಖಲು
ಕಾಸರಗೋಡು: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಕಾರಿನ ವಿರುದ್ಧ ಉಂಟಾದ ಆಕ್ರಮಣ ಘಟನೆಗೆ ಸಂಬಂಧಿಸಿ ಆದೂರು ಪೊಲೀಸರು ಕೇಸು ದಾಖಲಿಸಿದರು. ಚಾಲಕ ಮಧೂರಿನ ಸತೀಶ್ ಕೆ.ಎಸ್. (53) ನೀಡಿದ ದೂರಿನಲ್ಲಿ ಗುರುತು ಪತ್ತೆಹಚ್ಚಬಹುದಾದ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ತಿಂಗಳ 3ರಂದು ಕೇಸಿಗೆ ಆಸ್ಪದವಾದ ಘಟನೆ ಜರಗಿದೆ. ಮುಳಿಯಾರು ಬೋವಿಕ್ಕಾನ ರಸ್ತೆ ಜಂಕ್ಷನ್‌ನಲ್ಲಿ ಕಾರಿಗೆ ತಡೆಯೊಡ್ಡಿ ಬದಿಯಲ್ಲಿನ ಗಾಜನ್ನು ಹಾನಿಪಡಿಸಿ 5000 ರೂ.ಗಳ ನಾಶನಷ್ಟ ಉಂಟುಮಾಡಿರುವುದಾಗಿ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ಈ ಘಟನೆಯಲ್ಲಿ ವ್ಯಾಪಕ ಪ್ರತಿಭಟನೆ ಉಂಟಾಗಿದ್ದು, ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಡಿಜಿಪಿಗೆ ಸಹಿತ ದೂರು ನೀಡಿದ್ದರು. ಈಗ ಈ ವಿಷಯದಲ್ಲಿ ಪ್ರಥಮವಾಗಿ ಕೇಸು ದಾಖಲಿಸಲಾಗಿದೆ.