ಎಡನೀರು ಶ್ರೀಗಳ ಚಾತುರ್ಮಾಸ್ಯ ಮಂಗಲೋತ್ಸವ ನಾಳೆ

ಬದಿಯಡ್ಕ: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಚತುರ್ಥ ಚಾತುರ್ಮಾಸ್ಯ ವ್ರತಾಚರಣೆಯ ಮಂಗಲೋತ್ಸವ ನಾಳೆ ಜರಗಲಿದೆ. ಬೆಳಿಗ್ಗೆ 8 ಗಂಟೆಗೆ ಪ್ರಾತಃಕಾಲದ ಪೂಜೆ, ಮೃತ್ತಿಕಾ ವಿಸರ್ಜನೆ, ಸೀಮೋಲ್ಲಂಘನ ನಡೆಯಲಿದೆ. 9 ಗಂಟೆಗೆ ಶ್ರೀ  ಪದ್ಮಪ್ರಿಯ ಭಜನಾ ಮಂಡಳಿ ಕಾಸರಗೋಡು ಇವರಿಂದ ಭಜನೆ, 11 ಗಂಟೆಗೆ 60 ದಿನಗಳ ಕಾಲ ನಡೆದ ಅಖಂಡ ಭಜನಾ ಸಂಕೀರ್ತನೆಯ ಸಮಾರೋಪ ಸಭೆ ನಡೆಯಲಿದೆ. ಕನ್ಯಾಡಿ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಂದ ಆಶೀರ್ವಚನ, 11.45ಕ್ಕೆ ಕೇರಳ ಪೂರಕ್ಕಳಿ ಅಕಾಡೆಮಿ ಅಧ್ಯಕ್ಷ, ಮಾಜಿ ಶಾಸಕ ಕೆ. ಕುಪ್ಪೆರಾಮನ್ ಅವರ ನೇತೃತ್ವದಲ್ಲಿ ಪೂರಕ್ಕಳಿ, 12 ಗಂಟೆಗೆ ಅಷ್ಟೋತ್ತರ ಶತ ನಾರಿಕೇಳ ಯಾಗದ ಪೂರ್ಣಾಹುತಿ, ಮಹಾಪೂಜೆ ನಡೆಯಲಿದೆ.

2.30ಕ್ಕೆ ನಡೆಯುವ ಸಮಾರೋಪ ಸಭೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ  ಅಧ್ಯಕ್ಷತೆ ವಹಿಸುವರು. ಚಾತುರ್ಮಾಸ್ಯ  ಸಮಿತಿಯ ಗೌರವಾಧ್ಯಕ್ಷ ಟಿ. ಶ್ಯಾಮ್ ಭಟ್ ಉಪಸ್ಥಿತರಿರುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಅಭ್ಯಾಗತರಾಗಿ ಪಾಲ್ಗೊಳ್ಳುವರು. ಸಂಜೆ ೪ರಿಂದ ಇಂದಿರಾ ಶರ್ಮಾ ಬೆಂಗಳೂರು, ಮೇಧಾ ಮಂಜುನಾಥ ಬೆಂಗಳೂರು ಹಾಡುಗಾರಿಕೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದ್ದು, ವಯಲಿನಲ್ಲಿ ತನ್ಮಯಿ ಉಪ್ಪಂಗಳ, ಮೃದಂಗದಲ್ಲಿ ಅನೂರು ದತ್ತಾತ್ರೇಯ ಶರ್ಮಾ ಜೊತೆಗೂಡುವರು. ರಾತ್ರಿ 7 ಗಂಟೆಯಿಂದ ಕಲೈಮಾಮಣಿ ವೀರಮಣಿ ರಾಜು ಮತ್ತು ಅಭಿಷೇಕ್ ರಾಜು ಚೆನ್ನೈ ಹಾಗೂ ಬಳಗದವರಿಂದ ಭಕ್ತಿಗಾನ ಸಂಧ್ಯಾ ನಡೆಯಲಿದೆ.

You cannot copy contents of this page