ಎಡರಂಗ ಸರಕಾರದ ರಾಜ್ಯ ಮಟ್ಟದ 4ನೇ ವಾರ್ಷಿಕಕ್ಕೆ ಅದ್ದೂರಿಯ ಚಾಲನೆ
ಕಾಲಿಕಡವು: ಎಡರಂಗ ಸರಕಾರದ ನಾಲ್ಕನೇ ವಾರ್ಷಿಕದ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಕಾಲಿಕಡವಿನಲ್ಲಿ ಇಂದು ಬೆಳಿಗ್ಗೆ ಅದ್ದೂರಿಯ ಚಾಲನೆ ದೊರಕಿದೆ.
ಕಾಲಿಕಡವು ಮೈದಾನದಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡ ಕಾರ್ಯಕ್ರಮ ವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು. ಸಚಿವ ಕೆ. ರಾಜನ್ ಅಧ್ಯಕ್ಷತೆ ವಹಿಸಿದರು. ಬೃಹತ್ ಜನಸ್ತೋಮವೇ ಇಲ್ಲಿಗೆ ಹರಿದುಬಂದಿದೆ. ಸಚಿವರುಗಳಾದ ಕೆ.ಎನ್. ಬಾಲಗೋಪಾಲನ್, ಪಿ. ರಾಜೀವ್, ಪಿ.ಎ. ಮುಹಮ್ಮದ್ ರಿಯಾಸ್, ವಿ.ಎನ್. ವಾಸನ್, ಸಜಿ ಚೆರಿಯಾನ್, ಜೆ.ಪಿ. ಚಿಂಜುರಾಣಿ, ಕಡನ್ನಪ್ಪಳ್ಳಿ ರಾಮಚಂದ್ರನ್, ಜಿ.ಆರ್. ಅನಿಲ್, ಎಂ.ಬಿ. ರಾಜೇಶ್, ವಿ. ಶಿವನ್ ಕುಟ್ಟಿ, ಒ.ಆರ್. ಕೇಳು, ವೀಣಾ ಜೋರ್ಜ್, ಆರ್. ಬಿಂದು, ವಿ. ಅಬ್ದುಲ್ ರಹ್ಮಾನ್, ಎ.ಕೆ. ಶಶೀಂದ್ರನ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾರದ ಮುರಳೀಧರನ್ ಮೊದಲಾದವರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಇದಾದ ಬಳಿಕ ಪಡನ್ನಕ್ಕಾಡ್ ಬೇಕಲ್ ಕ್ಲಬ್‌ನಲ್ಲಿ ಜಿಲ್ಲೆಯ ವಿವಿಧ ಸ್ಥರಗಳ ಗಣ್ಯರೊಂದಿಗೆ ಮುಖ್ಯಮಂತ್ರಿಯವರು ಸಂವಾದ ನಡೆಸುವರು. ಇದರಲ್ಲಿ ಸರಕಾರಿ ಸವಲತ್ತುಗಳನ್ನು ಪಡೆಯುತ್ತಿರುವ ಫಲಾನುಭವಿಗಳು, ಕಾರ್ಮಿಕ ಸಂಘಟನೆ ಪ್ರತಿನಿಧಿಗಳು, ಯುವಜನರು, ವಿದ್ಯಾರ್ಥಿಗಳು, ಸಾಂಸ್ಕೃತಿಕ-ಕ್ರೀಡಾರಂಗದ ಪ್ರತಿನಿಧಿಗಳು, ಉದ್ದಿಮೆದಾರರು, ಆನಿವಾಸಿ ಕೇರಳೀಯ ಪ್ರತಿನಿಧಿಗಳು ಭಾಗವಹಿಸುವರು. ಇದಾದನಂತರ ಕಾರ್ಯಕ್ರಮದಂಗ ವಾಗಿ ಹೊಸದುರ್ಗ ನೋರ್ತ್ ಕೋಟಚ್ಚೇರಿಯಲ್ಲಿ ಎಡರಂಗ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ಸಂಜೆ ಬೃಹತ್ ರ‍್ಯಾಲಿ ನಡೆಯಲಿದೆ. ಇದರಲ್ಲೂ ಮುಖ್ಯಮಂತ್ರಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಎಡರಂಗ ಸರಕಾರದ ನಾಲ್ಕನೇ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು, ಅದನ್ನು ಬಹಿಷ್ಕರಿಸಲು ಯುಡಿಎಫ್ ಶಾಸಕರು ತೀರ್ಮಾನಿಸಿದ್ದಾರೆ. ಅದರಂತೆ ಶಾಸಕರಾದ ಎನ್.ಎ ನೆಲ್ಲಿಕುನ್ನು , ಎಕೆಎಂ ಅಶ್ರಫ್ ಇಂದಿನ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ.
ಕೇರಳ ಇಂದು ಬದಲಾಗಿದೆ- ಮುಖ್ಯಮಂತ್ರಿ
ಕಾಲಿಕಡವು: ಕೇರಳ ಇಂದು ಬದಲಾಗಿದೆ. ಇಂದು ಇರುವುದು ಹಳೆಯ ಕೇರಳವಲ್ಲ. ಇದೊಂದು ಜನಕೀಯ ಸರಕಾರವಾಗಿದೆ. ಈಗ ಎಡರಂಗ ಸರಕಾರ ರಾಜ್ಯದ ಅಭಿವೃದ್ಧಿಯೋಜನೆಗಳಲ್ಲಿ ಕಾಲಕ್ಕೆ ಹೊಂದಿಕೊಂಡು ಅಗತ್ಯದ ಬದಲಾವಣೆಗಳನ್ನು ತಂದಿದೆ. ಎಲ್ಲಾ ಪ್ರಾಕೃತಿಕ ದುರಂತಗಳನ್ನು ಎದುರಿಸುವಷ್ಟರ ಮಟ್ಟಿಗೆ ಕೇರಳ ಇಂದು ಮುಂದಕ್ಕೆ ಸಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಎಡರಂಗ ಸರಕಾರ ನಾಲ್ಕನೇ ವಾರ್ಷಿಕೋತ್ಸವದ ರಾಜ್ಯ ಮಟ್ಟದ ಉದ್ಘಾಟನೆಯನ್ನು ಇಂದು ಬೆಳಿಗ್ಗೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೇರಳಕ್ಕೆ ಅರ್ಹವಾದ ಯಾವುದೇ ನೆರವನ್ನು ಕೇಂದ್ರ ಸರಕಾರ ನೀಡುತ್ತಿಲ್ಲವೆಂದು ಅವರು ಇದೇ ಸಂದರ್ಭದಲ್ಲಿ ಆರೋಪಿಸಿದರು.