ಎಡಿಎಂ ನವೀನ್‌ಬಾಬು ಆತ್ಮಹತ್ಯೆ ವಿಷಯ ಪ್ರಶ್ನೆಪತ್ರಿಕೆಯಲ್ಲಿ
ಕಣ್ಣೂರು: ಕಣ್ಣೂರು ಎಡಿಎಂ ನವೀನ್‌ಬಾಬು ಅವರ ಸಾವನ್ನು ಉಲ್ಲೇಖಿಸಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಅಧ್ಯಾಪಕನನ್ನು ಕಣ್ಣೂರು ವಿಶ್ವವಿದ್ಯಾಲಯದಿಂದ ಹೊರಹಾಕಿದ ಘಟನೆ ನಡೆದಿದೆ. ಮಂಜೇಶ್ವರ ಲಾ ಕಾಲೇಜಿನಲ್ಲಿ ತಾತ್ಕಾಲಿಕ ಅಧ್ಯಾಪಕನಾಗಿದ್ದ ಶೆರಿನ್ ಪಿ. ಎಬ್ರಹಾಂರನ್ನು ಉದ್ಯೋಗದಿಂದ ಹೊರಹಾಕಲಾಗಿದೆಯೆಂದು ತಿಳಿದುಬಂದಿದೆ.
ಮೂರು ವರ್ಷಗಳ ಎಲ್‌ಎಲ್‌ಬಿ ಮೂರನೇ ಸೆಮಿಸ್ಟರ್ ಇಂಟರ್ನಲ್ ಪರೀಕ್ಷಾ ಪತ್ರಿಕೆಯಲ್ಲಿ ಎಡಿಎಂರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಶ್ನೆ ತಯಾರಿಸಲಾಗಿದೆ. ಅ. 28ರಂದು ನಡೆದ ‘ಆಪ್ಶೆನಲ್ ೩ ಹ್ಯೂಮನ್ ರೈಟ್ಸ್ ಲಾ ಆಂಡ್ ಪ್ರಾಕ್ಟೀಸ್’ ಎಂಬ ವಿಷಯಕ್ಕೆ ಸಂಬಂಧಿಸಿ ತಯಾರಿಸಿದ ಪ್ರಶ್ನೆ ಪತ್ರಿಕೆಯಲ್ಲಿ ಈ ವಿಷಯ ಒಳಪಡಿಸಲಾಗಿತ್ತು. ಇದೇ ವೇಳೆ ಪ್ರಶ್ನೆ ಪತ್ರಿಕೆಯಲ್ಲಿ ಎಡಿಎಂರ ಹೆಸರು ಅಥವಾ ಪಿ.ಪಿ. ದಿವ್ಯಾರ ಹೆಸರನ್ನು ಸೇರಿಸಿಲ್ಲವೆಂದು ಅಧ್ಯಾಪಕ ತಿಳಿಸುತ್ತಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂದು ಮಾತ್ರವೇ ಪ್ರಶ್ನೆ ಪತ್ರಿಕೆಯಲ್ಲಿತ್ತು. ಮಾನವಹಕ್ಕಿಗೆ ಸಂಬಂಧಿಸಿದ ಪ್ರಶ್ನೆಯನ್ನು ಮಾತ್ರವೇ ಅದರಲ್ಲಿ ಕಂಡಿರುವುದಾಗಿ ಅವರು ತಿಳಿಸಿದ್ದಾರೆ. ಇದೇ ವೇಳೆ ಅಧ್ಯಾಪಕನನ್ನು ಕೆಲಸಕ್ಕೆ ಮರು ನೇಮಕಗೊಳಿಸಬೇಕೆಂದು ಒತ್ತಾಯಿಸಿ ವಿಶ್ವವಿದ್ಯಾಲಯದ ಸೆನೆಟ್ಸ್ ಫಾರಂ ರಂಗಕ್ಕಿಳಿದಿದೆ.