ಎಡಿಜಿಪಿ ವಿರುದ್ಧ ವಿಜಿಲೆನ್ಸ್ ತನಿಖೆಗೆ ಶಿಫಾರಸು
ತಿರುವನಂತಪುರ: ಆಡಳಿತ ಪಕ್ಷದ ಶಾಸಕ ಪಿ.ವಿ. ಅನ್ವರ್ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಎಂ.ಆರ್. ಅಜಿತ್ ಕುಮಾರ್ ವಿರುದ್ಧ ಮಾಡಿರುವ ಗಂಭೀರ ಆರೋಪಗಳ ಬಗ್ಗೆ ವಿಜಿಲೆನ್ಸ್ ತನಿಖೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಡಾ. ಶೇಖ್ ದರ್ವೇಶ್ ಸಾಹೆಬ್ ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ. ಈ ಕುರಿತಾದ ಶಿಫಾರಸು ಪತ್ರವನ್ನು ಡಿಜಿಪಿ ಮುಖ್ಯಮಂತ್ರಿಗೆ ಸಲ್ಲಿಸಿದ್ದಾರೆ.
ಈ ವಿಷಯದಲ್ಲಿ ಮುಖ್ಯಮಂತ್ರಿ ನಾಳೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಎಡಿಜಿಪಿ ಅನಧಿಕೃತವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಶಾಸಕ ಪಿ.ವಿ. ಅನ್ವರ್ ಆರೋಪಿಸಿದ್ದಾರೆ. ಮಾತ್ರವಲ್ಲ ಎಡಿಜಿಪಿಯವರ ಅರಿವಿನೊಂದಿಗೆ ಎರಡು ಕೊಲೆಘಾತಕ ಕೃತ್ಯಗಳು, ಅಪಹರಣ ಇತ್ಯಾದಿ ಅಪರಾಧ ಕೃತ್ಯಗಳು ನಡೆದಿವೆ ಎಂದೂ ಅವರು ಆರೋಪಿಸಿದ್ದರು. ಇಂತಹ ಆರೋಪ ಗಳನ್ನೆಲ್ಲಾ ಗಂಭೀರವಾಗಿ ಪರಿಗಣಿಸಿ ಆ ಬಗ್ಗೆ ತೀವ್ರ ತನಿಖೆ ನಡೆಸುವ ತೀ ರ್ಮಾನವನ್ನೂ ಡಿಜಿಪಿ ಕೈಗೊಂಡಿದ್ದರು.
ಇದರಲ್ಲಿ ಅನಧಿಕೃತ ಆಸ್ತಿ ಸಂಪಾದನೆ ಕುರಿತಾದ ಆರೋಪಗಳ ಬಗ್ಗೆ ವಿಜಿಲೆನ್ಸ್ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿಗೆ ಸಲ್ಲಿಸಿದ ಶಿಫಾರಸು ಪತ್ರದಲ್ಲಿ ಡಿಜಿಪಿ ಆಗ್ರಹಪಟ್ಟಿದ್ದಾರೆ. ಡಿಜಿಪಿಯವರ ಮೇಲೆ ಹೊರಿಸಲಾಗಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ತೀರ್ಮಾನಕ್ಕೂ ಡಿಜಿಪಿ ಬಂದಿದ್ದಾರೆ. ಅದರಂತೆ ಎಡಿಜಿಪಿ ಅಜಿತ್ ಕುಮಾರ್ಗೆ ಶೀಘ್ರ ನೋಟೀಸು ಜ್ಯಾರಿಗೊಳಿಸುವ ಸಾಧ್ಯತೆಯೂ ಇದೆ. ಓಣಂ ಹಬ್ಬದ ಬಳಿಕ ಈ ವಿಷಯದಲ್ಲಿ ಎಡಿಜಿಪಿಯವರ ಹೇಳಿಕೆ ದಾಖಲಿಸಿಕೊಳ್ಳಲಾಗುವುದೆಂದು ಡಿಜಿಪಿ ತಿಳಿಸಿದ್ದಾರೆ.