ಎ.ಟಿ.ಎಂಗೆ ತುಂಬಿಸಲು ತಂದ 50 ಲಕ್ಷರೂ. ಕಳವು: ಆರೋಪಿಗಳು ಕರ್ನಾಟಕದತ್ತ ಪರಾರಿ ಶಂಕೆ
ಉಪ್ಪಳ: ಉಪ್ಪಳದಲ್ಲಿರುವ ಖಾಸಗಿ ಬ್ಯಾಂಕ್‌ನ ಎ.ಟಿ.ಎಂಗೆ ಹಣ ತುಂಬಿಸಲು ಬಂದ ವಾಹನದ ಗಾಜು ಪುಡಿಗೈದು ೫೦ ಲಕ್ಷ ರೂಪಾಯಿಗ ಳನ್ನು ಕಳವುಗೈದ ಪ್ರಕರಣದಲ್ಲಿ ಆರೋಪಿಗಳಿಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ. ಆರೋಪಿಗಳು ಕರ್ನಾಟಕದತ್ತ ಪರಾರಿಯಾಗಿದ್ದಾರೆಂಬ ಬಗ್ಗೆ ಸೂಚನೆ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ತನಿಖೆಯನ್ನು ಅತ್ತ ವಿಸ್ತರಿಸಲಾಗಿದೆ. ಉಪ್ಪಳ ಬಸ್ ನಿಲ್ದಾಣ ಸಮೀಪದ ಹೆದ್ದಾರಿ ಬದಿಯಲ್ಲಿ ಕಾರ್ಯಾಚರಿಸುವ ಆಕ್ಸಿಸ್ ಬ್ಯಾಂಕ್‌ನ ಎ.ಟಿ.ಎಂಗೆ ಹಣ ತುಂಬಿಸಲು ತಲುಪಿದ ವಾಹನದಿಂದ ೫೦ ಲಕ್ಷ ರೂಪಾಯಿ ಕಳವು ನಡೆಸಿದ ಘಟನೆ ನಿನ್ನೆ ಮಧ್ಯಾಹ್ನ ೨ ಗಂಟೆಗೆ ನಡೆದಿದೆ. ವಾಹನವನ್ನು ಎಟಿಎಂ ಸಮೀಪದ ರಸ್ತೆ ಬದಿ ನಿಲ್ಲಿಸಿ ಅದರ ಚಾಲಕ ಹಾಗೂ ಹಣ ತುಂಬಿಸುವ ವ್ಯಕ್ತಿ ಕೌಂಟರ್‌ಗೆ ತೆರಳಿದ್ದರು. ಈ ವೇಳೆ ಅಲ್ಲಿಗೆ ತಲುಪಿದ ವ್ಯಕ್ತಿಯೋರ್ವ ವಾಹನದ ಗಾಜು ಪುಡಿಗೈದು ಹಣ ಒಳಗೊಂಡಿದ್ದ ಪೆಟ್ಟಿಗೆಯನ್ನು ಕಳವುಗೈದು ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ಎ.ಟಿ.ಎಂ ಕೌಂಟರ್‌ಗೆ ಹಣ ತುಂಬಿಸುವ ಹೊಣೆಗಾರಿಕೆ ವಹಿಸಿಕೊಂಡ ಉಳಿಯತ್ತಡ್ಕ ನಿವಾಸಿ ಯತೀಂದ್ರ ಎಂಬವರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಘಟನೆ ನಡೆದ ತಕ್ಷಣವೇ ಮಂಜೇಶ್ವರ ಇನ್‌ಸ್ಪೆಕ್ಟರ್ ಕೆ. ರಾಜೀವ್ ಕುಮಾರ್ ನೇತೃತ್ವದ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಅಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ ಎಂಬಿವರೂ ಸ್ಥಳಕ್ಕೆ ತಲುಪಿದ್ದರು.
ಕಾಸರಗೋಡು, ಕುಂಬಳೆ, ಬದಿಯಡ್ಕ, ಮಂಜೇಶ್ವರ ಪೊಲೀಸರು ಕೂಡಾ ತಲುಪಿ ವಿವಿಧೆಡೆಗಳಲ್ಲಿ ಶೋಧ ನಡೆಸಲಾರಂಭಿಸಿದ್ದಾರೆ. ಪೇಟೆಯ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದು, ಅದರಲ್ಲಿ ವ್ಯಕ್ತಿಯೋರ್ವ ಬ್ಯಾಗ್ ಹಿಡಿದುಕೊಂಡು ಹೋಗುವ ದೃಶ್ಯಗಳು ಪತ್ತೆಯಾಗಿವೆ. ಆ ದೃಶ್ಯವನ್ನು ಕೇಂದ್ರೀಕರಿಸಿ ತನಿಖೆ ಮುಂದುವರಿಸಲಾಗಿದೆ.
ಕಳವು ತಂಡದಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿಯಿರಬಹುದೆಂದು ಅಂದಾಜಿಸಲಾಗಿದೆ. ಕಳವುಗೈದ ಹಣವನ್ನು ಅಲ್ಪವೇ ದೂರದಲ್ಲಿ ನಿಲ್ಲಿಸಿದ್ದ ಕಾರಿಗೆ ತುಂಬಿಸಿ ತಂಡ ಅಲ್ಲಿಂದ ಪರಾರಿಯಾಗಿದೆ ಯೆಂದೂ ತಿಳಿದುಬಂದಿದೆ.
ನಿನ್ನೆ ಸಂಜೆಯಿಂದಲೇ ಉಪ್ಪಳ, ಮಂಜೇಶ್ವರ ಸಹಿತ ಅನ್ಯರಾಜ್ಯ ಕಾರ್ಮಿಕರು ವಾಸಿಸುವ ಪ್ರದೇಶಗಳ ಸಹಿತ ವಿವಿಧೆಡೆಗಳಲ್ಲಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇಂದು ಮುಂಜಾನೆವರೆಗೆ ದಾಳಿ ಮುಂದುವರಿದಿದೆ. ಇದೇ ವೇಳೆ ಆರೋಪಿಗಳು ಉಪ್ಪಳದಿಂದ ಒಳ ರಸ್ತೆ ಮೂಲಕ ಕರ್ನಾಟಕದತ್ತ ಪರಾರಿಯಾಗಿದ್ದಾರೆಂಬ ಬಗ್ಗೆ ಸೂಚನೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ಕಳ್ಳರ ಪತ್ತೆಗಾಗಿ ಕರ್ನಾಟಕ ಪೊಲೀಸರ ಸಹಾಯ ಯಾಚಿಸಿರುವುದಾಗಿ ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಸೆರೆಹಿಡಿಯಲು ಸಾಧ್ಯವಿದೆಯೆಂಬ ನಿರೀಕ್ಷೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.