ಐಲ ಮೈದಾನ ಸಂರಕ್ಷಣೆ: ಕ್ಷೇತ್ರದಲ್ಲಿ ಬೃಹತ್ ಸಮಾವೇಶ
ಉಪ್ಪಳ: ಐಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಉತ್ಸವಾಂ ಗಣವಾದ ಐಲ ಮೈದಾನವನ್ನು ಸಂರಕ್ಷಿಸುವ ಸಲುವಾಗಿ ಕ್ಷೇತ್ರದಲ್ಲಿ ಭಕ್ತರ ಸಮಾವೇಶ ಜರಗಿತು. ರಾಜ್ಯಸರಕಾರದ ವಿವಿಧ ಕಚೇರಿಗಳನ್ನು ಐಲ ಮೈದಾನದಲ್ಲಿ ಸ್ಥಾಪಿಸುವ ಬಗ್ಗೆ ನಕ್ಷೆ ತಯಾರಿಸಿ ಅಧಿಕಾರಿಗಳು ಸ್ಥಳ ಸಂದರ್ಶಿಸಿರುವುದನ್ನು ವಿರೋಧಿಸುವ ಬಗ್ಗೆ ಸಭೆ ನಡೆಸಲಾಗಿದೆ. ತಂತ್ರಿ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ಮಾತನಾಡಿ ನಮ್ಮ ಸಂಸ್ಕೃತಿ ನೆಲ, ಜಲವನ್ನು ಉಳಿಸಲು ರಾಜಕೀಯ ಬಿಟ್ಟು ಒಂದಾಗೋಣ ಎಂದು ನುಡಿದರು. ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ಸಂದೇಶವನ್ನು ವಾಚಿಸಲಾಯಿತು.
ರವೀಶ ತಂತ್ರಿ ಕುಂಟಾರು ಪ್ರಧಾನ ಭಾಷಣ ಮಾಡಿದರು. ಅವರು ಮಾತನಾಡಿ ಐಲದ ಉತ್ಸವ ಮೈದಾನವನ್ನು ಯಾವುದೇ ಬೆಲೆತೆತ್ತಾದರೂ ಉಳಿಸಲು ಬದ್ಧರಾಗಬೇಕೆಂದು ಕರೆನೀಡಿದರು. ಮಲಬಾರ್ ದೇವಸ್ವಂ ಬೋರ್ಡ್ ಏರಿಯಾ ಸಮಿತಿ ಸದಸ್ಯ ಶಂಕರ್ ರೈ ಮಾತನಾಡಿ ಮೈದಾನದಲ್ಲಿ ಸರಕಾರಿ ಕಚೇರಿ ಬರುವ ಕಳವಳ ಬೇಡ, ಅದನ್ನು ಸರಕಾರ ಕೈಬಿಟ್ಟಿದೆ ಎಂದು ತಿಳಿಸಿದರು. ಸುಬ್ಬಯ್ಯ ರೈ ಅಧ್ಯಕ್ಷತೆ ವಹಿಸಿದರು. ಆರ್‌ಎಸ್‌ಎಸ್ ಕಣ್ಣೂರು ವಿಭಾಗ ಕಾರ್ಯವಾಹ್ ಲೋಕೇಶ್ ಜೋಡುಕಲ್ಲು, ಬಿಜೆಪಿ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್, ಮಂಜುನಾಥ ಆಳ್ವ ಮಡ್ವ, ಜಯರಾಮ, ಬಾಲಕೃಷ್ಣ ವಾನಂದೆ, ವಿಜಯ ಕುಮಾರ್, ಮೀರಾ ಆಳ್ವ, ಅಶೋಕ್ ಪೂಜಾರಿ ಲಾಲ್‌ಬಾಗ್, ರಾಮಕೃಷ್ಣ ಕಡಂಬಾರ್, ಮಾಗಣೆ ಪ್ರಮುಖರು ಉಪಸ್ಥಿತರಿದ್ದರು. ಕ್ಷೇತ್ರಾಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮೋಹನದಾಸ ಐಲ ವಂದಿಸಿದರು. ಕಮಲಾಕ್ಷ ಐಲ ನಿರೂಪಿಸಿದರು.