ಐ.ಎ.ಎಫ್ ವಿಮಾನ ಅಪಘಾತ: 56 ವರ್ಷಗಳ ನಂತರ ಪತ್ತನಂತಿಟ್ಟ ನಿವಾಸಿ ಸೇರಿದಂತೆ ನಾಲ್ವರು ಸೈನಿಕರ ಮೃತದೇಹ ಪತ್ತೆ
ನವದೆಹಲಿ: ಮಹತ್ವದ ಬೆಳ ವಣಿಗೆಯೊಂದರಲ್ಲಿ 1968ರಲ್ಲಿ ಹಿಮಾ ಚಲ ಪ್ರದೇಶದ ಲಾಹೌಲ್ ಕಣಿವೆ ಯಲ್ಲಿ ಅಪಘಾತಕ್ಕೀಡಾದ ಭಾರತೀಯ ವಾಯುಪಡೆ (ಐ.ಎ.ಎಫ್)ದ ಎ.ಎನ್. 12 ವಿಮಾನದ ಅವಶೇಷಗಳಿಂದ ಭಾರತೀಯ ಸೇನಾ ತಂಡ ಪತ್ತನಂತಿಟ್ಟ ನಿವಾಸಿ ಸೇರಿದಂತೆ ನಾಲ್ವರು ಸೈನಿಕರ ಮೃತದೇಹಗಳನ್ನು ಪತ್ತೆಹಚ್ಚಿ ಹೊರತೆಗೆದಿದೆ.
1968 ಫೆಬ್ರವರಿ 7ರಂದು ಭಾರತೀಯ ವಾಯುಪಡೆಗೆ ಸೇರಿದ ವಿಮಾನವು 102 ಸೇನಾ ಸಿಬ್ಬಂದಿಗಳನ್ನು ಹೇರಿಕೊಂಡು ಹೋಗುತ್ತಿದ್ದ ವೇಳೆ ಹಿಮಾಚಲ ಪ್ರದೇಶದ ರೋಹ್ತಾಂಗ್ ಪಾಸ್ ಬಳಿ ಪತನಗೊಂಡಿತ್ತು. ಈ ವಿಮಾನ ಚಂಡೀಘಡದಿಂದ ಲೇಹ್‌ಗೆ ಹೋಗುತ್ತಿತ್ತು. ಈ ವಿಮಾನದ ಅವಶೇಷಗಳನ್ನು 2003ರಲ್ಲಿ ಪತ್ತೆಹಚ್ಚಲಾಗಿತ್ತು. 2019ರ ವರೆಗೆ ಕೇವಲ ಐವರ ಮೃತದೇಹಗಳನ್ನು ಮಾತ್ರವೇ ಪತ್ತೆಹಚ್ಚಲು ಸಾಧ್ಯವಾಗಿತ್ತು. ಭಾರತೀಯ ಸೇನೆಯ ಡೋಗ್ರಾ ಸ್ಟಾಟ್ಸ್ ಮತ್ತು ತಿರಂಗಾ ಮೌಂಟೇನ್ ರೆಸ್ಕ್ಯೂ ತಂಡಗಳ ಸಿಬ್ಬಂದಿಗಳು ಬಾಕಿ ಸೈನಿಕರ ಪತ್ತೆಗಾಗಿ ಶೋಧ ಕಾರ್ಯಾಚರಣೆಯನ್ನು ನಿರಂತರವಾಗಿ ಮುಂದುವರಿಸಿತ್ತು. ಅದರಂತೆ ಉಪಗ್ರಹ ಸಂವಹನ ಮೂಲಕ ಲಭಿಸಿದ ಮಾಹಿತಿ ಪ್ರಕಾರ ನಿನ್ನೆ ಮತ್ತೆ ನಾಲ್ವರು ಸೈನಿಕರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಈ ಆವಿಷ್ಕಾರವು 1968ರ ಅಪಘಾತದಲ್ಲಿ ಸಾವನ್ನಪ್ಪಿದವರ ಅವಶೇಷಗಳನ್ನು ಮರಳಿ ಪಡೆಯುವ ದೀರ್ಘ ಹಾಗೂ ಶ್ರಮದಾಯಕ ಪ್ರಯತ್ನದ ಭಾಗವಾಗಿದೆ.
ಪತ್ತೆಯಾಗಿರುವ ಸೈನಿಕರ ಮೃತದೇಹಗಳನ್ನು ಪತ್ತನಂತಿಟ್ಟ ಜಿಲ್ಲೆಯ ಇಲವಂತೂರು ಈಸ್ಟ್ ಓಟಾಲಿಲ್‌ನ ದಿ| ಒ.ಎಂ. ಥೋಮಸ್-ಏಲಿಯಮ್ಮ ದಂಪತಿ ಪುತ್ರ ಥೋಮಸ್ ಚೆರಿಯನ್, ಮಲ್ಕಾನ್ ಸಿಂಗ್ ಉತ್ತರಾಖಂಡ ಖಡವಾಲ್‌ನ ನಾರಾಯಣ ಸಿಂಗ್ ಎಂದು ಗುರುತಿಸಲಾಗಿದೆ.ಇನ್ನೊಂದು ಮೃತದೇಹದ ಗುರುತು ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ಥೋಮಸ್ ಚೆರಿಯಾನ್‌ರ ಮೃತದೇಹವನ್ನು ಊರಿಗೆ ತರುವ ಪ್ರಯತ್ನ ನಡೆಸಲಾಗುತ್ತಿದೆ. ಅಂತ್ಯಕ್ರಿಯೆಯನ್ನು ಮಿಲಿಟರಿ ಗೌರವಗಳೊಂದಿಗೆ ಮೃತರ ಹುಟ್ಟೂರಲ್ಲೇ ನಡೆಸುವ ಸಿದ್ಧತೆಯನ್ನೂ ಆರಂಭಿಸಲಾಯಿತು. ಭಾರತೀಯ ಭೂಸೇನೆಯಲ್ಲಿ ಕ್ರಾಫ್ಟ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದ ಥೋಮಸ್ ಚೆರಿಯಾನ್‌ರಿಗೆ ಅಂದು ಕೇವಲ 22 ವರ್ಷ ವಯಸ್ಸಾಗಿತ್ತು.