ಒಂದು ರಾಷ್ಟ್ರ -ಒಂದು ಚುನಾವಣೆ ವಿಧೇಯಕ : ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ವಿಪ್ ಜ್ಯಾರಿ
ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ವಿಧೇಯಕವನ್ನು ಇಂದು ಲೋಕಸಭೆಯಲ್ಲಿ ಮಂಡಿಸಲು ಕೇಂದ್ರ ಸರಕಾರ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತನ್ನ ಎಲ್ಲಾ ಸಂಸದರಿಗೆ ವಿಪ್ ಜ್ಯಾರಿಗೊಳಿಸಿದೆ ಮಾತ್ರವಲ್ಲ ಸಂಸತ್‌ನಲ್ಲಿ ಖಡ್ಡಾಯವಾಗಿ ಉಪಸ್ಥಿತರಿರುವಂ ತೆಯೂ ಕಠಿಣ ನಿರ್ದೇಶ ನೀಡಿದೆ.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘಾವಾಲ್ ಅವರು ಲೋಕಸಭೆಯಲ್ಲಿ ಇಂದು ಒಂದು ರಾಷ್ಟ್ರ- ಒಂದು ಚುನಾವಣೆ ಮಸೂದೆಯನ್ನು ಮಂಡಿಸಲಿದ್ದಾರೆ. ಇದರ ನಂತರ ಮಸೂದೆಯನ್ನು ವ್ಯಾಪಕ ಸಮಾಲೋಚನೆಗಾಗಿ ಸಂಸತ್‌ನ ಜಂಟಿ ಸಮಿತಿಗೆ ಕಳುಹಿಸುವಂತೆ ಅವರು ಸ್ಪೀಕರ್ ಓಂ ಬಿರ್ಲಾ ಅವರಲ್ಲಿ ವಿನಂತಿಸಿಕೊಳ್ಳುವ ಸಾಧ್ಯತೆ ಇದೆ.
ಲೋಕಸಭೆಯ ಕಲಾಪ ಕಾರ್ಯಸೂಚಿಯಲ್ಲಿ ಈ ಮಸೂದೆಯನ್ನು ಸೇರ್ಪಡೆಗೊಳಿಸಲಾ ಗಿದೆ. ಸಂವಿಧಾನದ (129ನೇ ತಿದ್ದುಪಡಿ) ಮಸೂದೆ ಹಾಗೂ ಕೇಂದ್ರ ಪ್ರಾಂತ್ಯವಾರು ಕಾಯ್ದೆಗಳ (ತಿದ್ದುಪಡಿ) ಮಸೂದೆಯನ್ನೂ ಕಾನೂನು ಸಚಿವರು ಮಂಡಿಸಲಿದ್ದಾರೆ. ನಂತರ ಮಸೂದೆ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ಆರಂಭಗೊಳ್ಳಲಿದೆ. ವಿಧಾನಸಭೆ ಅಸ್ತಿತ್ವದಲ್ಲಿರುವ ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿರುವ ಕಾಯ್ದೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಸಂಬಂಧಿಸಿದ ಮಸೂದೆಗಳನ್ನು ಒಗ್ಗೂಡಿಸುವ ಒಂದು ಸರಳ ಮಸೂದೆ ಹಾಗೂ ಸಂವಿಧಾನ (ತಿದ್ದುಪಡಿ) ಮಸೂದೆಗಳಿಗೆ ಕೇಂದ್ರ ಸಚಿವ ಸಂಪುಟ ಈಗಾಗಲೇ ಅನುಮೋದನೆ ನೀಡಿದೆ.
ಈ ತಿದ್ದುಪಡಿ ಮಸೂದೆಗೆ ಲೋಕಸಭೆಯ ಅಂಗೀಕಾರ ಲಭಿಸಿದಲ್ಲಿ ಲೋಕಸಭೆ ಹಾಗೂ ವಿವಿಧ ರಾಜ್ಯ ವಿಧಾನಸಭೆಗಳಿಗೆ ಏಕ ಕಾಲದಲ್ಲಿ ಚುನಾವಣೆ ನಡೆಸಲು ಅವಕಾಶ ಕಲ್ಪಿಸಲಿದೆ.