ಒಂದು ವರ್ಷ ಹಿಂದೆ ಕಳವು ನಡೆದ ಮನೆಗೆ ಮತ್ತೆ ನುಗ್ಗಿದ ಕಳ್ಳರು
ಮಂಜೇಶ್ವರ: ಒಂದು ವರ್ಷದ ಹಿಂದೆ ಕಳವು ನಡೆದ ಮನೆಗೆ ಕಳ್ಳರು ಮತ್ತೆ ನುಗ್ಗಿದ ಘಟನೆ ನಡೆದಿದೆ. ಮಂಜೇಶ್ವರ ಮಚ್ಚಂಪಾಡಿಯ ಅನಿವಾಸಿ ಇಬ್ರಾಹಿಂ ಖಲೀಲ್‌ರ ಮನೆಗೆ ಕಳೆದ ಸೋಮವಾರ ರಾತ್ರಿ ಕಳ್ಳರು ನುಗ್ಗಿದ್ದಾರೆ. ಮನೆಯ ಮೇಲಿನ ಮಹಡಿಗೆ ಹತ್ತಿದ ಕಳ್ಳರು ಅಲ್ಲಿನ ಬಾಗಿಲು ಮುರಿದು ಮನೆಯೊಳಗೆ ಪ್ರವೇಶಿಸಿದ್ದಾರೆ. ಆದರೆ ಮನೆಯಲ್ಲಿ ಬೆಲೆಬಾಳುವ ಸೊತ್ತುಗಳು ಲಭಿಸದ ಹಿನ್ನೆಲೆಯಲ್ಲಿ ಸಿಸಿ ಕ್ಯಾಮರಾ ಸಹಿತ ಇಲೆಕ್ಟ್ರಾನಿಕ್ ಉಪಕರಣಗಳನ್ನು ಕಳ್ಳರು ದೋಚಿದ್ದಾರೆ. ಇದೇ ವೇಳೆ ಗಲ್ಫ್‌ನಿಂದ ಊರಿಗೆ ಬರುತ್ತಿದ್ದ ಇಬ್ರಾಹಿಂ ಖಲೀಲ್ ಹಾಗೂ ಕುಟುಂಬ ಮನೆಯ ಸಿಸಿ ಕ್ಯಾಮರಾಗಳನ್ನು ಮೊಬೈಲ್ ಫೋನ್‌ನಲ್ಲಿ ವೀಕ್ಷಿಸುತ್ತಿದ್ದರು. ಆದರೆ ದಿಢೀರ್ ದೃಶ್ಯಗಳು ಅಗೋಚರಗೊಂ ಡಿವೆ. ಕೂಡಲೇ ಅವರು ಸಮೀಪದ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಅವರು ತಲುಪಿ ನೋಡಿದಾಗಲೇ ಕಳ್ಳರು ಮನೆಗೆ ನುಗ್ಗಿದ ವಿಷಯ ಅರಿವಿಗೆ ಬಂದಿದೆ. ನಿನ್ನೆ ಮನೆಗೆ ತಲುಪಿದ ಇಬ್ರಾಹಿಂ ಖಲೀಲ್ ಕಳವು ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಹಾಗೂ ಬೆರಳಚ್ಚು ತಜ್ಞರು ತಲುಪಿ ಪರಿಶೀಲನೆ ನಡೆಸಿದ್ದಾರೆ. ಕಳವು ಬಗ್ಗೆ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.