ಒಂದೇ ಕುಟುಂಬದ ಮೂರು ಮಂದಿ ಮೃತಪಟ್ಟ ಸ್ಥಿತಿಯಲ್ಲಿ: ಹೆತ್ತವರ ಕೊಲೆಗೈದ ಬಳಿಕ ಪುತ್ರ ಆತ್ಮಹತ್ಯೆ ಶಂಕೆ
ಕೋಟಯಂ: ಕಾಞಿರಪಳ್ಳಿಯ ಒಂದೇ ಕುಟುಂಬದ ಮೂರು ಮಂದಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚಿರಭಾಗಂ ಪೂಂದೋಟ ನಿವಾಸಿ ಸೋಮನಾಥನ್ ನಾಯರ್ (84), ಪತ್ನಿ ಸರಸಮ್ಮ (55), ಪುತ್ರ ಶ್ಯಾಮ್ ನಾಥ್ (31) ಎಂಬಿವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದವರು. ಹೆತ್ತವರನ್ನು ಕೊಂದ ಬಳಿಕ ಯುವಕ ನೇಣು ಬಿಗಿದಿರಬೇಕು ಎಂದು ಪ್ರಾಥಮಿಕ ತನಿಖೆಯಿಂದ ತಿಳಿಯಲಾಗಿದೆ. ಸೋಮನಾಥನ್ ನಾಯರ್ ಹಾಗೂ ಸರಸಮ್ಮರ ಮೃತದೇಹಗಳು ಡೈನಿಂಗ್ ಹಾಲ್ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿದೆ. ಸಮೀಪದ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪುತ್ರನ ಮೃತದೇಹ ಕಂಡು ಬಂದಿದೆ. ಹೆತ್ತವರನ್ನು ಕತ್ತಿಯಿಂದ ತಲೆಗೆ ಬಡಿದು ಕೊಲೆಗೈದಿರಬೇಕೆಂದು ಶಂಕಿಸಲಾಗಿದೆ.
ಇತರ ಮಕ್ಕಳು ಹೆತ್ತವರನ್ನು ದೂರವಾಣಿ ಮೂಲಕ ಕರೆ ಮಾಡಿದಾಗ ಸ್ವೀಕರಿಸದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ನಡೆಸಿದ ತನಿಖೆಯಲ್ಲಿ ಘಟನೆ ಬಗ್ಗೆ ತಿಳಿದು ಬಂದಿದೆ. ಸೊತ್ತಿನ ದಾಖಲೆಗಳನ್ನು ಕೂಡಾ ಸುಟ್ಟು ಹಾಕಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದ್ದು, ಆಸ್ತಿ ಸಂಬಂಧವಾದ ವಿವಾದವೇ ಕೊಲೆಗೆ ಕಾರಣವೆಂದು ಶಂಕಿಸಲಾಗಿದೆ. ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ. ಮೃತಪಟ್ಟ ಸೋಮನ್ ನಿವೃತ್ತ ಎಎಸ್ಐ ಆಗಿದ್ದು, ಪುತ್ರ ಶ್ಯಾಮ್ನಾಥ್ ಸಿವಿಲ್ ಸಪ್ಲೈ ನೌಕರನಾಗಿದ್ದಾನೆ.